Tuesday, March 23, 2010

ವಲಸೆಗೆ ಕಡಿವಾಣ - ಭಾರತಕ್ಕೆ ವರದಾನ?

ಅಮೆರಿಕ ನಿನ್ನೆಯಷ್ಟೇ ಅರೋಗ್ಯ ಮಸೂದೆಯನ್ನ ಅಂಗೀಕರಿಸಿದೆ. ಈಗ ವಲಸೆ ನಿಯಂತ್ರಣದ ಕುರಿತು ಪಿಸು ಮಾತು ಪ್ರಾರಂಭವಾಗಿದೆ. ಯವುದೇ ಸರಕಾರೀ ನೀತಿಯು ಕೂಡ ತಜ್ಞರ ವರದಿಯನ್ನು ಆಧರಿಸಿರುತ್ತದೆ. ೧೦ ಪ್ರತಿಶತ ನಿರೋದ್ಯೋಗಿಗಳನ್ನು ಹೊಂದಿರುವ ಅಮೆರಿಕಾದ ಆತ್ಮಸ್ಥೈರ್ಯ ಕುಸಿಯುತ್ತಿರುವುದು ಸರಕಾರವನ್ನು ಕಂಗೆಡಿಸಿದೆ.


ನಿರುದ್ಯೋಗದ ಕೂಗು ಮುಗಿಲು ಮುಟ್ಟಿದೆ. ನಿರುದ್ಯೋಗಕ್ಕೆ ಕಾರಣ ಹುಡುಕ ಹೋರಾಟ ಒಂದುಗುಂಪಿಗೆ ಸಹಜವಾಗಿ ಕಂಡದ್ದು ವಲಸಿಗರು.. ವಲಸಿಗರ ನಾಡಾಗಿ ಸುಖದ ಕನಸು ಹೊತ್ತು ಬಂದ ಅನೇಕ ದೇಶ-ಭಾಷೆ-ಜನಾಂಗಗಳನ್ನ ತನ್ನಲ್ಲಿ ಬರಮಾಡಿಕೊಂಡ ಅಮೆರಿಕ ಇಂದು ವಲಸೆಯ ಸತ್ಪರಿಣಾಮ ಮತ್ತು ದುಷ್ಪರಿಣಾಮದ ಕುರಿತು ದತ್ತಾಧಾರಿತ ಅಧ್ಯಯನ ನಡೆಸಿದೆ.


ದೇಶದ ಒಟ್ಟಾರೆ ಅರ್ಥಿಕ ಪರಿಸ್ಥಿತಿ, ಜನಾಂಗೀಯ ಅಶಾಂತತೆ, ಅತಿಯಾದ ನಾಗರೀಕತೆಯಿಂದ ಹದಗೆಡುವ ಪರಿಸರ, "ಕೊರತೆ" ಯನ್ನು ಕಂಡರಿಯದ ನಗರಗಳು ಇಂದು ಮೂಲಸೌಕರ್ಯಕ್ಕೆ ಪರಿತಪಿಸುವನ್ತಾಗಿದ್ದು, ಉದ್ಯೋಗ ಹಾನಿ, ಹಣದುಬ್ಬರ, ಔದ್ಯೋಗೀಕರಣದಿಂದ ನಾಶವಾದ ಅರಣ್ಯ ಸಂಪತ್ತು ಹೀಗೆ ವಿವಿಧ ಆಯಾಮದಲ್ಲಿ ವಿಮರ್ಶೆ ಚರ್ಚೆಗೆ ನಾಂದಿ ಹಾಡಿದೆ. ಪ್ರಪಂಚದ ಎಲ್ಲ ಆಗುಹೋಗುಗಳಲ್ಲಿ ಮೂಗು ತೋರಿಸುತ್ತಾ ತನ್ನ ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧಕರನ್ನು ನೇಮಿಸುವ ಅಮೆರಿಕ ಪೂರ್ವ ನಿಯಾಮಕ ಪ್ರವೃತ್ತಿಯನ್ನು ಹೊಂದಿದೆ. ಅದೆಂದೂ ಬೆಂಕ ಬಿದ್ದಮೇಲೆ ಬಾವಿ ತೋಡುವ ಜಡತ್ವ ತೋರದು.


ಒಂದು ವಾಕ್ಯದಲ್ಲಿ ವಿವರಿಸಬೇಕೆಂದರೆ "ಒಬಾಮ ಸರಕಾರ ಚುರುಕಾಗಿ ಕಾರ್ಯೋನ್ಮುಖವಾಗಿದೆ."


ಇದರ ಬಿಸಿ ನಮ್ಮ ಪಲಾಯನ ವಾದಿಗಳಿಗೆ ತಟ್ಟದಿರದು. ದಶಕಗಳಿಂದ ದೇಶದ ಅತ್ಯುತ್ತಮ ಪ್ರತಿಭೆಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿ ಉಡುಗೊರೆಯಾಗಿ ನೀಡುವ ಸರಬರಜುಗಾರ ಭಾರತವಾಗಿತ್ತು. ಉತ್ತಮ ಜೀವನ ಮಟ್ಟದ ಆಕರ್ಷಣೆಗೆ ಒಳಗಾಗಿ ದೇಶವನ್ನು ತ್ಯಜಿಸಿ ಅಮೇರಿಕಾದಲ್ಲಿ ನೆಲೆಸಿರುವ ಅದೆಸ್ತೋ ಜನ ಇಲ್ಲಿನ ನಾಗರಿಕತ್ವ ಪಡೆದಿದ್ದು ಜೀವನದೊಂದಿಗೆ ಬೆರೆತು ಹೋಗಿದ್ದಾರೆ. ೧೯ನೆ ಶತಮಾನದಲ್ಲಿ ಯುರೋಪೆ ೨೦ನೆ ಶತಮಾನದಲ್ಲಿ ಏಶಿಯ ಅತ್ಯಧಿಕ ವಲಸಿಗರನ್ನು ಕಾಣಿಕೆ ನೀಡಿದೆ.


ಇದರಿಂದ ಭಾರತ ಉತ್ತಮ ಮಾನವಸಂಪನ್ಮೂಲವನ್ನು ತನ್ನಲ್ಲೇ ಉಳಿಸಿಕೊಲ್ಲಲಿದೆ. ಸೀಮಿತ ಅವಧಿಯಲ್ಲಿ ಇದು ನೋವಾಗಿ ಪರಿಣಮಿಸಿದರು ಭಾರತದ ಅಭ್ಯುಥ್ಥಾನಕ್ಕೆ ಇದು ಅಡಿಗಲ್ಲಾದೀತೇ? ತಾವು ಜೀವಿಸುವ ನಾಡಲ್ಲೇ ಸಾಧನೆಗೈಯುವ ಹೊಸ ಪ್ರವೃತ್ತಿಗೆ ಕಾರಣವಾದೀತೇ? ಜಾಗತೀಕರಣ ಚಳುವಳಿ ಸ್ತಬ್ಧವಾಗಿ ಮತ್ತೆ ಸ್ವದೇಶೀ ಚಳುವಳಿ ಶುರುವಾದೀತೇ? ಪರಕೀಯರೆಂದು ನಮ್ಮವರಲ್ಲ ಎನ್ನುವ ಕಟು ಸತ್ಯ ನಮ್ಮ ಯುವಕರಿಗೆ ತಿಳಿದೀತೇ? ನಿತ್ಯವೂ ಸಾಗರೋಲ್ಲಂಘನದ ಕನಸು ಕಾಣುವ ನಮ್ಮ ನಗರವಾಸಿಗಳ ಮನೋಭಿಲಾಷೆ ಇನ್ನಾದರೂ ಬದಲಾದೀತೆ?


ಬದಲಾವಣೆಯ ಗಾಳಿಯಂತು ಬೀಸುತ್ತಿದೆ. ಅಮೆರಿಕ ಎಂದೆಂದಿಗೂ ಕಂಡರಿಯದ ಭಯದಿಂದ ತಲ್ಲಣಗೊಂಡಿದೆ. ಕೆಲಸ ಪರಭಾರೆ ಮಾಡುವುದು ಕೂಡ ಇಲ್ಲಿ ಟೀಕೆಗೆ ಗುರಿಯಾಗಿದೆ. ತಯಾರಿಕ ಘಟಕಗಳು ಚೀನಾಕ್ಕೆ ಚಲಿಸಿದರೆ ತಂತ್ರ್ರಜ್ಞಾನ ಭಾರತದ ಕಡೆ ದಾಪುಗಾಲು ಹಾಕುತ್ತಿದೆ. ಅಮೆರಿಕ ಕೇವಲ ಲಾಭದಿಂದ ತೃಪ್ತಿ ಪದೆಯುವನ್ತಿಲ್ಲ . ಏಕೆಂದರೆ ಕೆಲಸಗಾರರು ಗಳಿಸಿದ ಹಣ ಎಲ್ಲಿ ವ್ಯಯವಗುತ್ತದೋ ಆ ಆರ್ಥಿಕತೆ ಅಭಿವ್ರುದ್ದಿಯಾಗುತ್ತದೆ ಎನ್ನುವ ಸರಳ ತತ್ವ ಒಬ್ಬ taxi ಚಾಲಕನಿಗೂ ತಿಳಿಯುತ್ತಿದೆ. ಹೀಗಾಗಿ ಬಹುರಾಷ್ಟ್ರೀಯ ಕಂಪನಿಗಳ ಲಾಭ ಗಳಿಸುವ ಲಾಲಸೆಗೆ ಸರಕಾರ ಮೂಗುದಾರ ಹಾಕುತ್ತಿದೆ. ಸ್ವದೇಶೀ ಚಳುವಳಿ ಅಮೇರಿಕಾದಲ್ಲೂ ಪ್ರಾರಂಭ. ಆದರೆ ಅದನ್ನು ಮೊದಲು ಪರಿಕಲ್ಪಿಸಿದ್ದು ಭಾರತೀಯರೇ ಅನ್ನುವುದು ಮಾತ್ರ ವಿಪರ್ಯಾಸ .

1 comment:

ಬಾಲು ಸಾಯಿಮನೆ said...

ಉತ್ತಮ ಲೇಖನ. ಧನ್ಯವಾದಗಳು. ನಗರ ವಲಸೆ, ನಂತರ ಅಲ್ಲಿಂದ ಅಮೇರಿಕ ವಲಸೆ, ಎನ್ನುವುದು ನಮ್ಮಲ್ಲಿ ಸಾಮಾನ್ಯವಾಗುತ್ತಿರುವ ಈ ಸಂದರ್ಭದಲ್ಲಿ , ಇದು ಹಿಮ್ಮುಖ ಬೆಳವಣಿಗೆಗೆ ಕಾರಣವಾದೀತೆ?
ಹಳ್ಳಿಗರ ಬದುಕು ಹಸನಾಗಲು, ಹಳ್ಳಿಯಲ್ಲೇ ಹುಟ್ಟಿ ಬೆಳೆದ ಒಂದಷ್ಟು ಜನರು, ಯೋಚಿಸಿದರೆ, ಸಾಕು. ಬದಲಾವಣೆ ಕಷ್ವೇನಿಲ್ಲ.