ನಾನು ಸಣ್ಣವನಾಗಿದ್ದಾಗಅಂದ್ರೆ ಸುಮಾರು ೨೫ ವರ್ಷಗಳ ಹಿಂದಿನ ಮಾತು. ನಮ್ಮೂರು ಇನ್ನು ವಿದ್ಯತ್ , ದೂರದರ್ಶನ ಇತ್ಯಾದಿಗಳ ಹಾವಳಿಗೆ ಒಳಪಟ್ಟಿರದ ಕಾಲವದು. ಮನೋರಂಜನೆಗಾಗಿ ಊರಿನಲ್ಲಿ ಯಕ್ಷಗಾನ ತಾಳಮದ್ದಲೆ, ಊರವರೆ ಕಲಿತು ಆಡುವ ನಾಟಕಗಳು , ೫ ದಿನವು ಸಾಂಸ್ಕೃತಿಕ ಕಾರ್ಯಕ್ರಮದಿಂದ ಗಣೇಶೋತ್ಸವ, ಮಳೆಗಾಲದಲ್ಲಿ ಮಂತ್ರಾಲಯ ರಾಘವೇಂದ್ರ ಜಯಂತಿ, ಕೃಷ್ಣಾಷ್ಟಮಿಯ ಯಕ್ಷಗಾನ, ಗಂಗಾಷ್ಟಮಿಯ ೯ ದಿನಗಳ ಕವಡಿಕೆರೆ ಜಾತ್ರೆ, ಶರನವರಾತ್ರ್ಯಿಯ ೯ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕೀರ್ತನೆಗಳು, ಅನಂತನ ಚತುರ್ದಶಿ, ಶ್ರಾವಣ ನವರಾತ್ರಿ, ಎಲ್ಲಾಪುರದ ಜಾತ್ರೆ, ಶಿವರಾತ್ರಿ,ಸಿರಸಿ ಜಾತ್ರೆ , ಯುವಜನ ಮೇಳ, ಸಂಗೀತ ಕಾರ್ಯಕ್ರಮ, ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಒಂದೇ ಎರಡೇ ವರ್ಷವೆಲ್ಲಾ ಎನದೊರೊಂದು ಕಾರ್ಯಕ್ರಮ ಇದ್ದೆ ಇರುತ್ತಿತ್ತು.
ಅದರಲ್ಲೂ ನಮ್ಮವರೇ ಕಲಿತು ಅದುವ ನಾಟಕ, ಯಕ್ಷಗಾನ, ತಾಳಮದ್ದಲೆ ನನಗೆ ಪಂಚಪ್ರಾಣ.
ಇಂತಹ ಕಾರ್ಯಕ್ರಮಗಳಲ್ಲಿ ಒಂದಲ್ಲ ಒಂದು ಹಾಸ್ಯ ಪ್ರಸಂಗ ನಡೆಯುತ್ತಿತ್ತು. ತಮಗಾಗಿ ಕೆಲವನ್ನು ಸಂಗ್ರಹಿಸಿದ್ದೇನೆ.
ಕೃಷ್ಣ ಸಂಧಾನದಲ್ಲಿ ಕೃಷ್ಣನ ಪಾತ್ರಧಾರಿಯ ಸಂಭಾಷಣೆ:
ಧರ್ಮರಾಯಂಗೆನಾತು ಅರ್ಜುನಂಗೆನಾತು ನನಗೇನು ಗೊತ್ತಪ್ಪ? ಕೌರವನ ಹತ್ರ ಐದು ಮಕ್ಕಿ ಗದ್ದೆಯನ್ನಾದರೂ ಪಾಂಡವರಿಗೆ ಕೊಡು ಎಂದು ಕೇಳಿ ಬರಲು ಬಾರಕೋಲು ಹೆಗಲಿಗೆ ಹಾಕ್ಕಂಡು ಸಾತ್ಯಕಿ ಕಟ್ಟಿದ ಗಾಡಿಯಲ್ಲಿ ಹಸ್ತಿನಾವತೀಗೆ ಹೊರಟಿದ್ದೆ. [ ಅಡಿಕೆ ತೋಟವಿಲ್ಲದ , ಕೇವಲ ಭತ್ತದಗದ್ದೆಯನ್ನು ಮಾತ್ರ ಹೊಂದಿದ್ದ ಪಾತ್ರಧಾರಿ "೫ ಮಕ್ಕಿಗದ್ದೆ" ಎಂದು ಹೇಳಿ ನಮ್ಮನ್ನೆಲ್ಲ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದರು. ಮಕ್ಕಿ ಗದ್ದೆ -ನೀರಿಲ್ಲದ ಎತ್ತರದಲ್ಲಿರುವ ಒಣ ಭತ್ತದ ಗದ್ದೆ. ಬಾರಕೋಲು - ಗಳಿಯ ಅಂದರೆ ಎತ್ತಿನ ಜೋಡಿಯನ್ನು ಗದರಿಸಲು ಚಕ್ಕಡಿ ಗಾಡಿಯನ್ನು ಹೊಡೆಯುವವ ಬಳಸುವ ಮರದ ಹಿಡಿಕೆಯುಳ್ಳ ಚಾವಟಿಗೆ ]
ಅದೇ ಪ್ರಸಂಗದಲ್ಲಿ ಅರ್ಜುನನ ಪಾತ್ರಧಾರಿಯ ಉಪಮೆಯನ್ನು ಕೇಳಿ:
"ಹಾಲಿಗೆ ಉಪ್ಪು ಹಾಕಿದರೆ ಬದ್ದುಹೊಗುತ್ತದೆ ಹಾಗೆಯೇ ಎಣ್ಣೆ ಮತ್ತು ಸೀಗೆಕಾಯಿ ಜೊತೆಯಲ್ಲಿ ಬದುಕಲು ಸಾಧ್ಯವೇ? ಆದರಿಂದ ಕೌರವನಲ್ಲಿ ಕುಸ್ತಿ ಹೊಡೆಯುವುದೇ ಒಳ್ಳೇದು. "
ಇದೆ ಪ್ರಸಂಗದಲ್ಲಿ ಕೃಷ್ಣ ಓಡಿಹೋಗಲಿ ಎಂದು ರಚಿಸಿದ ಓದ್ದೊಳಗವನ್ನು ಉದ್ದೇಶಿಸಿ ಕೌರವ ತನ್ನ ಪರಾಕ್ರಮವನ್ನು ,ಸಭೆಯಲ್ಲಿ ವರ್ಣಿಸಿದ್ದು ಹೀಗೆ:
"ಆಸೇತು ಹಿಮಾಚಲ ಪರ್ಯಂತವಾಗಿ ವಿಜಯ ಪತಾಕೆಯನ್ನು ಹಾರಾಡಿಸಿದ್ದೇನೆ ಅಷ್ಟ ದ್ವಾರಗಳಲ್ಲಿಯು ಸಹಾ ಬಿಚ್ಚುಗಚ್ಚೆಯ ವಾಲರನ್ನು ನಿಲ್ಲಿಸಿದ್ದೇನೆ!". [ ಕಂಠ ಪಾಠ ಮಾಡಿದ್ದ ಪಾತ್ರಧಾರಿಯ ಮಾತಿನಲ್ಲಿ "ಬಿಚ್ಚುಗತ್ತಿಯಾ ಶೂರರನ್ನು " ಅನ್ನುವುದು ಈ ರೀತಿ ಅಪಭ್ರಂಶಕ್ಕೊಳಗಾಗಿತ್ತು ]
ನಮ್ಮ ಮನೆಯ ಪಕ್ಕದ ದೇವರ ಗದ್ದೆಯಲ್ಲಿ ಯಕ್ಷಗಾನ ಬಯಲಾಟವಿತ್ತು. ಸ್ತಳೀಯ ಮೆಳವೊಂದರಿಂದ ಯಕ್ಷಗಾನ. ರಾತ್ರಿ -ಬೆಳಗಾಗುವವರೆಗೆ. ಗದ್ದೆಯಲ್ಲಿ ಒಂದು ಮೂಲೆಯಲ್ಲಿ ಗೊಣಬೆಯನ್ನು ಹಾಕಲಾಗಿತ್ತು. ರಾತ್ರಿ "ಚಂದ್ರಹಾಸ" ಅನ್ನುವ ಮೊದಲ ಪ್ರಸಂಗ. "ಗದಾಯುಧ್ಧ"ಎರಡನೇ ಪ್ರಸಂಗ. ಭರ್ಜರಿಯಾಗಿ ಕುಣಿದು ಜನರನ್ನು ರಂಜಿಸಿದ ದುಷ್ಟ ಬುದ್ದಿ ಪಾತ್ರಧಾರಿ ಎರಡನೇ ಪ್ರಸಂಗದಲ್ಲಿ ಭಾಗವಹಿಸಿರಲಿಲ್ಲ.
ನಂತರ ಗದಯುಧ್ಧ. ರೋಚಕ ಸನ್ನಿವೇಶಗಳಿಂದ ಕೂಡಿದ ಗದಾಯುದ್ಧ ಚೆನ್ನಾಗೆ ಸಾಗಿತ್ತು. ಭೀಮನ ಪಾತ್ರಧಾರಿ "ಕಪಟದ ಜೂಜಿನ ಕುರುಕುಲ ಕುನ್ನಿ ಕಸುವಿನ ಜೂಜಾಡುವ ಬಾರೈ" ಎಂದು ಕೌರವನನ್ನು ಚೆನ್ನಾಗಿ ಹೀಗಳೆದು ಅದ್ಭುತ ಕುಣಿತ ಪ್ರದರ್ಶಿಸಿದ್ದ. ನಂತರ ಕೌರವನಿಂದ ಹಣೆಗೆ ಗದಾಪ್ರಹಾರದಿಂದ ಭೀಮನ ಪಾತ್ರಧಾರಿ ನೆಲಕ್ಕೆ ಮಲಗಿದ್ದ. ಕೌರವ "ನೋಡಿರಿ ಧರ್ಮಜ ಫಲುಗುನಾದಿಗಳು ರೂಢಿಯೋಳನಿಲಜ ಬಿದ್ದ ಚಂದವನು" ಎಂದು ತಮ್ಮ ವಾಕ್ವೈಭವವನ್ನು ಮೆರೆದಿದ್ದರು. ಆದರೆ ಇತ್ತ ಸುಸ್ತಾಗಿದ್ದ ಭೀಮನ ಪಾತ್ರಧಾರಿಗೆ ಚೆನ್ನಾಗಿ ನಿದ್ದೆ ಬಂದಿತ್ತು. ಏನೇ ಮಾಡಿದರು ಭೀಮ ಏಳುತ್ತಲೇ ಇರಲಿಲ್ಲ. ಗೊರಕೆ ಕೂಡ ಕೇಳಲು ಶುರುವಾಗಿತ್ತು. ಅರ್ಥ ಮುಗಿದು ಭಾಗವತರು ಮುಂದಿನ ಪದ್ಯ ಹೇಳುತ್ತಲೇ ಇದ್ದರು. ಭೀಮ ಏಳದಿರುವುದನ್ನು ಕಂಡು ಭಾಗವತರು ಮಧ್ಯದಲ್ಲಿ "ಯೋಳೋ ಭೀಮ... ನರಸಿಂಹ...." ಎಂದು ಆಶು ಪದ್ಯ ಕಟ್ಟಿ ಹಾಡಿದ್ದು ನಮಗೆಲ್ಲ ಗೊತ್ತಾಗಿ ತುಂಬಾ ನಗು ತರಿಸಿತ್ತು. [ ಪಾತ್ರಧಾರಿಯ ಹೆಸರು ನರಸಿಂಹ ಭಟ್ಟ ]
ಕೃಷ್ಣಣ ಪಾತ್ರಧಾರಿ ತನ್ನ ಕೊಳಲಿನಿಂದ ತಿವಿದ ಮೇಲೆ ಭೀಮ ಎದ್ದಿದ್ದು.
ಇದೆ ಪ್ರಸಂಗ ಮುಗಿದು ಬೆಳಿಗ್ಗೆ ಯಕ್ಷಗಾನದವರಿಗೆಲ್ಲ ದೇವಸ್ಥಾನದಲ್ಲಿ ಉಪಾಹಾರ. ವೇಷವನ್ನು ಕಳಚಿ ಮೇಳ ಎಲ್ಲ ಸಾಮಗ್ರಿಗಳನ್ನು ತುಂಬಿ ಕೊಂಡು ಹೊರಟು ಬಂದಿತ್ತು. ಸುಮಾರು ೮ ಗಂಟೆಯ ಸಮಯ. ಹೊರಗೆನಿಂತಿದ್ದ ನಮಗೆ ಗದ್ದೆಯಲ್ಲಿ ವೇಷ ಸಹಿತ ಬರುತ್ತಿರುವ "ದುಷ್ಟ ಬುಧ್ಧಿ "... ನಮಗೆಲ್ಲ ಭಯವೋ ಭಯ. ಊರಿನ ಮಧ್ಯೆ ಹಗಲಲ್ಲಿ ವೇಷ.... ವಿಷಯ ಏನಾಗಿತ್ತು ಅಂದ್ರೆ!!... ಪಾತ್ರಧಾರಿ ಗೊಣಬೆಯ ಅಟ್ಟದ ಪಕ್ಕದಲ್ಲಿ ಮಲಗಿದ್ದು ಕತ್ತಲಲ್ಲಿ ಯಾರಿಗೂ ಕಾಣಿಸಿರಲಿಲ್ಲ. ಬೆಳಕು ಹರಿಯುವ ಮೊದಲೇ ಪ್ರಸಂಗ ಮುಗಿದಿತ್ತು. ಯಾರು ಎಬ್ಬಿಸಿಯು ಇರಲಿಲ್ಲ. ವೇಷಸಹಿತ ನಿದ್ದೆ ಹೋಗಿದ್ದ. ಎದ್ದು ನೋಡಿದಾಗ ಗದ್ದೆಯೆಲ್ಲ ಬರಿದು. ಗೆಜ್ಜೆ,ಕಿರೀತ ಎಲ್ಲ ಇದ್ದ ಆತ ಬರುವುದು ಕಂಡು ನಮಗೆಲ್ಲ ಆಮೇಲೆ ನಗು ತರಿಸಿತ್ತು. ರಾತ್ರಿ ಯಕ್ಷಗಾನ ವೀಕ್ಷಣೆಗೆ ಬಂದಿದ್ದವರಲ್ಲಿ ಕೆಲವರು ಮೂತ್ರ ವಿಸರ್ಜನೆಗಾಗಿ ಗೊಣಬೆಯ ಪಕ್ಕ ಹೋಗುತ್ತಿದ್ದದ್ದು ಈ ಘಟನೆಗೆ ಇನ್ನಷ್ಟು ಒಗ್ಗರಣೆ ಹಾಕಿತ್ತು ಅಂತ ಬೇರೆ ಹೇಳಬೇಕಾಗಿಲ್ಲ....
ನಮ್ಮ ಸ್ಥಳೀಯರಲ್ಲಿ ಅನೇಕ ಮರಿ ಕಲಾವಿದರಿದ್ದರು. ಪ್ರಸಂಗದಲ್ಲಿ ತಂದೆಯನ್ನು ಸಂಬೋಧಿಸಲು "ಹೇ-ತಾತನೆ" "ಹೇ-ತಾತನೆ" ಎಂದು ಪದೇ ಪದೇ ಹೇಳಿದಾಗ ನಾವೆಲ್ಲ ಅಲ್ಲಿಯೇ ಮುಖ ಮುಖ ನೋಡಿ ಮುಸಿ ಮುಸಿ ನಕ್ಕಿದ್ದು, ಚೌತಿಯ ಋಷಿ ಪಂಚಮಿಯ ತಾಳಮದ್ದಳೆಯಲ್ಲಿ - ರಾಮ ನಿರ್ಯಾಣದಲ್ಲಿ ಕಾಲನ ಪಾತ್ರಧಾರಿ ಪದೇ ಪದೇ ಎಲೈ "ದೂರ್ವಾಸನೆ" "ದೂರವಾಸನೆ" ಎಂದು ಸಂಬೋಧಿಸುವಾಗ ಚೌತಿಯ ಪಂಚಕಜ್ಜಾಯಡ ಕಡೆ ಸಂಶಯ ಬಂದಿದ್ದಂತೂ ನೆನೆಸಿಕೊಂಡರೆ....
ಮತ್ತೊಂದು ಬಾರಿ ಕರ್ಣ ಪರ್ವ ಪ್ರಸಂಗ. ಧರ್ಮರಾಯನಿಗು ಕರ್ಣನಿಗೂ ಯುಧ್ಧ. ಸಹಜವಾಗಿ ಕರ್ಣನ ಪಾತ್ರಧಾರಿ ಹೆಚ್ಚು ಪ್ರಸಿದ್ಧ ಕಲಾವಿದರೇ ಆಗಿದ್ದರು. ಧರ್ಮರಾಜನದು ಚಿಕ್ಕ ಸಂಭಾಷಣೆ ಇದ್ದುದರಿಂದ ಮರಿ ಕಲಾವಿದರಿಗೆ ಪ್ರಾಶಸ್ತ್ಯ. ಅವರು ಮಠದ ಪುರೋಹಿತರು ಬೇರೆ. ಯುಧ್ಧದ ಸಂಭಾಷಣೆ ಹೀಗಿತ್ತು.
"ಎಲೈ ಧರ್ಮಜ... ನೀನು ಯಾಕೆ ಯುದ್ಧಕ್ಕೆ ಬಂದೆ? ಮಡಿಯನ್ನು ಉಟ್ಟು ಮಂತ್ರ ಪಠಣ ಮಾಡು. ಇಲ್ಲವೇ ಜ್ಯೋತಿಷ್ಯ ಹೇಳು.ತಮ್ಮನಾದ ಅರ್ಜುನನನ್ನೋ ಭೀಮನನ್ನೋ ಕಳುಹಿಸು. ಯಾಕೆ ಸುಮ್ಮನೆ ಯುಧ್ಧಕ್ಕೆ ಬಂದು ಹೆಣಗಳ ರಾಶಿಯನ್ನು ಮುಟ್ಟಿ ಮೈ ಮಲಿನ ಮಾಡುತ್ತಿ?"
ತಕ್ಷಣ ಧರ್ಮರಾಜ "ಇದೋ ನಿನಗೆ ವಯುವ್ಯಾಸ್ತ್ರವನ್ನು ಬಿಟ್ಟಿದ್ದೇನೆ" ಅಂದ. ಕರ್ಣ "ಅದನ್ನು ಪರ್ವತಾಸ್ತ್ರದಿಂದ ತದೆದಿದ್ದೇನೆ"
ಇದೋ "ಆಗ್ನೆಯಸ್ತ್ರವನ್ನು ಬಿಟ್ಟಿದ್ದೇನೆ" ಕರ್ಣ "ವರುನಾಸ್ತ್ರದಿಂದ ಶಮನ ಮಾಡಿದ್ದೇನೆ" ಧರ್ಮಜ" ಇದೋ ನೋಡು ಅಂಗವಸ್ತ್ರವನ್ನು ಬಿಟ್ಟಿದ್ದೇನೆ" ಅನ್ನಬೇಕೆ? ತಕ್ಷಣ ಕರ್ಣನ ಪಾತ್ರಧಾರಿ "ಅಂಗವಸ್ತ್ರವನ್ನು ಕೊಕ್ರಸ್ತ್ರದಿಂದ ಸಿಕ್ಕಿಸಿಹಾಕಿದ್ದೇನೆ" ಕೊನೆಗೂ ಕರ್ಣ ಸೋಲಲೇ ಇಲ್ಲ...ನೆರೆದಿದ್ದ ಜನರೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು...
ಸುಧನ್ವಾರ್ಜುನ ಪ್ರಸಂಗ.. "ಆಗಸುಧನ್ವನು ಬೇಗದಿ ರಣಕನುವಾಗುತ"... ಮುಗಿಯುತ್ತಿದ್ದಂತೆ ಸುಧನ್ವ ತನ್ನ ತಾಯಿಯನ್ನು ಕಂಡ ಆಶೀರ್ವಾದ ಪಡೆದ ನಂತರ . [ನಾಲ್ಕುಕಾಲಿನ] ಹರಿಯನ್ನು ಕಟ್ಟಿದ ನೆಪದಿಂದ [ಎರಡು ಕಾಲಿನ] ಶ್ರೀಹರಿಯನ್ನು ಕಾಣುವ ತಂದೆಯಾದ ಹಂಸಧ್ವಜನ ಮಹತ್ವಾಕಾಂಕ್ಷೆಯಿಂದ ಮಗ ಸುಧನ್ವ ಯುದ್ಧೋತ್ಸುಕನಾಗಿ ಮಡದಿಯನ್ನು ಕಾಣಲು ಬರುತ್ತಾನೆ. ನವಯವ್ವನೆಯು ಋತುಸ್ನಾತಳು, ಪುತ್ರಾಕಾಂಕ್ಷಿಯು ಆಗಿರುವ ಪ್ರಭಾವತಿಯ - ಸುಧನ್ವನ ನಡುವೆ ಪ್ರಣಯ - ಪ್ರೀತಿಯ ರಸಿಕ ಸನ್ನಿವೇಶವದು. ಪ್ರಭಾವತಿಯ ಪಾತ್ರಧಾರಿ ಗಂಡನನ್ನು ಅಂದರೆ ಸುಧನ್ವನನ್ನು "ಹಾ-ಪ್ರಿಯ" "ಹಾ- ಪ್ರಿಯ " ಎಂದು ಸಂಬೋಧಿಸುತ್ತಿದ್ದ. ಇದು ಗ್ರಾಮೀಣ ಜನಕ್ಕೆ "ಹಪ್ರಿಯ" "ಹಪ್ರಿಯ" ಎಂದು ಕೇಳಿಸಿತ್ತು. ["ಹಪ್ರಿಯ" ಎಂದರೆ ಒಣ ಎಲೆಯ ಬಣ್ಣವನ್ನು ಹೋಲುವ ಒಂದು ಜಾತಿಯ ಹಾವು.]
2 comments:
ಶಿವರಾ೦ ಭಟ್ ರೆ..
ಹಾಸ್ಯ ಪ್ರಸ೦ಗಗಳು ತು೦ಬಾ ನಗು ತರಿಸಿದವು...
ಮತ್ತೊ೦ದೆ೦ದರೆ... ನಿಮ್ಮ ಕಾಮೆ೦ಟ್ನಲ್ಲಿ ಸಿಗುವ ನಿಮ್ಮ ಹೆಸರಿನ ಲಿ೦ಕ್ ಗೆ ಕ್ಲಿಕ್ ಮಾಡಿದರೆ ನಿಮ್ಮ ಪ್ರೊಫೈಲ್ ಓಪನ್ನಾಗುತ್ತದಶ್ಟೆ...ಅಲ್ಲಿ ನಿಮ್ಮ ಬ್ಲಾಗಿನ ಲಿ೦ಕ್ ಸಿಗುವುದಿಲ್ಲ...ನಿಮ್ಮ ಪ್ರೊಫೈಲ್ ನಲ್ಲಿ ಬ್ಲಾಗ್ ಇಡಿ ದಯವಿಟ್ಟು...
ವ೦ದನೆಗಳು...
ನಮಸ್ಕಾರ ಚುಕ್ಕಿಚಿತ್ತಾರ ರಿಗೆ,
ದಯವಿಟ್ಟು ತಾವು ಈ ಕೊಂಡಿಯನ್ನು ತಮ್ಮ ಜಾಲಚರಿ ಗೆ ಸೇರಿಸಿ.
http://shivarama-bhat.blogspot.com/
ಅಲ್ಲ ಜಾಲಚರಿಗಳಲ್ಲಿಯು ಖಾತೆಯ ಕೊಂಡಿಗೆ ನೀವು ಅಮುಕಿದರೆ ಇದೆ ಸಮಸ್ಯೆ ಇದೆ.
ನಗು ತರಿಸುವುದೇ ಬರಹದ ಉದ್ದೇಶ. ಅಸ್ಟೇ ಅಲ್ಲದೆ ಹೊಸತನವಿತ್ತು ಎಂದು ಭಾವಿಸುತ್ತೇನೆ.
ಓದುಗರು ಹೆಚ್ಚಾದಸ್ತು ಹಂಚಿಕೊಳ್ಳಲು ಸ್ಪೂರ್ತಿ.
ವಂದನೆಗಳು.
ಶಿವರಾಂ
Post a Comment