Saturday, March 06, 2010

ನೆನಪು

ರಾಷ್ಟ್ರ ಕವಿ ಕುವೆಂಪುರವರಿಗೂ ನನಗು ಒಂದು ಸಾಮ್ಯವಿದೆ
:-)  ನಾನು ಶ್ರೀರಾಮಕೃಷ್ಣ ಆಶ್ರಮದ ಹಳೆಯ ವಿದ್ಯಾರ್ಥಿ ನಾನು ಎರಡು ವರ್ಷ ಅಲ್ಲಿ ಉಳಿದಿದ್ದರೆ ಕುವೆಂಪು ಅವರು ಉಳಿದದ್ದು ಹನ್ನೆರಡು ವರ್ಷ!ಕುವೆಂಪು ಅವರ ಕೃತಿಗಳು ೨೦ ನೆ ಶತ ಮಾನದ ಅಧ್ಬುತಗಳು! ಜನ್ಮತಹ ಒಕ್ಕಲಿಗರಾದ ಕುವೆಂಪು ಯಾವ ಸಂಸೃತ ವಿದ್ವಾಂಸರಿಗೂ ಕಡಿಮೆ ಇಲ್ಲದಸ್ಟು ಅಸಾಮಾನ್ಯ ಸಂಸ್ಕ್ರತ ಪಾಂಡಿತ್ಯ ಹೊಂದಿದ್ದರು. ಕುವೆಂಪು ಬರಹ ವೇದ ಉಪನಿಶತ್ತುಗಳಂತೆ ತತ್ವ  ಭರಿತವು  ಸತ್ವ  ಭರಿತವು  ಆಗಿ  ಗೀರ್ವಾಣಿ ಮತ್ತು ಕನ್ನಡದ  ದಿವ್ಯ ಮಿಲನವಾಗಿತ್ತು .
ಹೌದು. ಕುವೆಂಪು ಜೀವನದಲ್ಲಿ ಸ್ವಾಮೀ ವಿವೇಕಾನಂದರ ಪ್ರಭಾವ ಅಂತಸ್ತವಾಗಿದೆ. ಅವರ ವಿಶ್ವ ಮಾನವ ಕಲ್ಪನೆಯಿರಲಿ, ಸನಾತನ ಹಿಂದೂ ಧರ್ಮದ ಅನರ್ಥ ನಂಬಿಕೆಗಳ ಮೂಲೋತ್ಪಾಟನೆಯ ಕಲ್ಪನೆಯಿರಲಿ ವಿವೇಕಾನಂದರ ಸ್ಪೋಟಕ ವಿಚಾರಗಳ ಕನ್ನಡದ ಆವೃತ್ತಿ ಎಂದರೆ ತಪ್ಪಲ್ಲ.
ಕುವೆಂಪು ವಿರಚಿತ "ಸ್ವಾಮೀ ವಿವೇಕಾನಂದ " ಒಂದು ಅಧ್ಬುತ ಕೃತಿ. ನನ್ನನ್ನು  ಸರ್ವರೀತಿಯಿಂದ ರೂಪಿಸಿದ ಮಾರ್ಗದರ್ಶಿ. ಶ್ರೀರಾಮಕೃಷ್ಣ ಮಠದ ಗರಡಿಯಲ್ಲಿ ಬೆಳೆದ ಕುವೆಂಪುರವರ ವ್ಯಕ್ತಿತ್ವ ವಿವೇಕಾನಂದರ ನೆರಳು.
ಕೊಲಂಬೊದಿಂದ ಅಲ್ಮೊರಕೆ, ವಿವೇಕಾನಂದರ ಕೃತಿಶ್ರೇಣಿ, ಶ್ರೀ ರಾಮಕೃಷ್ಣ ವಚನವೇದ ಅಲ್ಲದೆ ಶ್ರೀರಾಮಕೃಷ್ಣರ ಪರಂಪರೆಯ ಅನೇಕ ಸ್ವಾಮೀಜಿಗಳ ದಿವ್ಯ ಕೃತಿಗಳನ್ನು, ಸ್ತೋತ್ರ ಗೀತೆಗಳನ್ನು ಮೂಲಭಾವಕ್ಕೆ ತಕ್ಕಂತೆ ಭಾಷಾಂತರಿಸಿದ ಕುವೆಂಪು ಶಬ್ದಗಳ ಗಾರುಡಿಗ.
ರಾಮಕೃಷ್ಣ ಮಠದ "ಜ್ಯೋತಿ" ಅಥವಾ "ಕೀರ್ತನ ಸಂಗ್ರಹ"ದಲ್ಲಿ ಕುವೆಂಪುರವರ ಭಾಷಾಂತರಿತ ಸ್ತೋತ್ರಗಳು ಗೀರ್ವಾಣ ಭಾರತಿಯ ಅರ್ಥ ಗೌರವವನ್ನ ತುಂಬಿಕೊಂಡ ಸುಂದರ ಮಧುರ ಭಕ್ತಿ ವೇದ.
ಇಂದಿಗೂ ಯಾವುದೇ ಧರ್ಮ ತಾರತಮ್ಯ ಹೊಂದಿರದ, ಯಾವುದೇ ಪೂರ್ವಗ್ರಹ ಪೀಡಿತ ತತ್ವ ಪ್ರಚುರಪದಿಸದ, ಯಾವುದೇ ಹಗರಣಗಳ ನೆರಳು ಸೊಂಕದೆ ತನ್ನ ಪಾವಿತ್ರ್ಯ ಕಾಪಾಡಿಕೊಂಡಿರುವ, ತೆರೆ ಮರೆಯಲ್ಲಿ ಪ್ರಚಾರದ ಅಬ್ಬರವಿಲ್ಲದೆ ಸಮಾಜದ ಏಳ್ಗೆಗೆ ಸಮರ್ಪಣ ಭಾವದಿಂದ
ಸರ್ವ ಸಂಗ ಪರಿತ್ಯಾಗಿಗಳಾಗಿ ದುಡಿಯುತ್ತಿರುವ ಅಸಂಖ್ಯಾತ ಮಹಾತ್ಮರನ್ನು ಕೊಡುಗೆ ನೀಡಿದ್ದು ಶ್ರೀ ರಾಮಕೃಷ್ಣ ಮಠ.
ಹೌದು ರಾಮಕೃಷ್ಣ  ಮಠ ಶ್ರೀ ಸ್ವಾಮೀ ಜಗದಾತ್ಮಾನಂದರು, ಪುರುಷೋತ್ತಮಾನಂದರು, ಶ್ರೀ ಹರ್ಷನಂದಜಿ ಯವರಂತಹ ಮಹಾತ್ಮರು ಬಾಳಿ ಸಮಾಜವನ್ನು ಬೆಳಗಿದ ಈ ದೇಶದ ಮಹಾನ್ ಸಂಸ್ಥೆ. ಇಂತಹ ಮಹಾನ್ ಸಂಸ್ಥೆ ನನ್ನಂತಹ ಸಾವಿರಾರು  ಬಡ ವಿದ್ಯಾರ್ಥಿಗಳಿಗೆ ಆಶ್ರಯ ತಾಣವಾಗಿತ್ತು. ವ್ಯಕ್ತಿತ್ವ ರೂಪಿಸಿತ್ತು. ಅಲ್ಲಿಯ ಸ್ವಾಮೀಜಿಗಲೊಂದಿಗಿನ ನನ್ನ ಒಡನಾಟ ನನ್ನ ಜೀವನದ ಮಧುರ ಗೀತೆ.ಜೀವನದಲ್ಲಿ  ನಿತ್ಯ ಸ್ಮರಣೀಯ ಅಮೂಲ್ಯ ಕ್ಷಣನಗಳನ್ನು ಕಳೆದದ್ದು  ಅಲ್ಲಿಯೇ. ನನ್ನ ಬಾಲ್ಯವನ್ನು ಅತ್ಯಂತ ಸುಂದರ ಅದ್ಭುತ ಕಾವ್ಯವಾಗಿ ರೂಪಿಸಿ, ಈ ದೇಶದ ಅನೇಕ ಮಾಹನ್ ವ್ಯಕ್ತಿಗಳ ದರ್ಶನ-ಸಂಪರ್ಕದ  ಅವಕಾಶ ನೀಡಿದ ಗುರುಕುಲ.
ಶ್ರೀ ಸ್ವಾಮೀ ಪುರುಷೋತ್ತಮಾನಂದರು ತಮ್ಮ ಕೊಠಡಿಗೆ  ನನ್ನನ್ನು ಬರಮಾಡಿ ತಮ್ಮ ಅನೇಕ ಕೃತಿಗಳನ್ನು ಓದಲು ಕೊಡುತ್ತಿದ್ದರು. ಅವರ "ವಿದ್ಯಾರ್ಥಿಗೊಂದು ಪತ್ರ" "ಶಕ್ತಿ ಶಾಲಿ ವ್ಯಕ್ತಿತ್ವ ನಿರ್ಮಾಣ" ಮೊದಲಾದ ಅಮೂಲ್ಯ ಕಿರು ಹೊತ್ತಗೆಗಳ ಬಾಲ ವಿಮರ್ಶಕ ನಾನಾಗಿದ್ದೆ.
ನ್ಯಾಷನಲ್ ಕಾಲೇಜಿನಿಂದ ವಿದ್ಯಾರ್ಥಿ ಮಂದಿರಂ ನ ದಾರಿಯಲ್ಲಿ ಶ್ರೀ ಮಠಕ್ಕೆ ನಾನು ನಿತ್ಯವೂ ಹೋಗುತ್ತಿದ್ದೆ. ಅಲ್ಲಿಯ ಸುಂದರ ಪರಿಸರ, ಸಾತ್ವಿಕರ ಪಾದಸ್ಪರ್ಶದಿಂದ ಪವಿತ್ರವಾಗಿರುವ ಭೂತಲ, ಚಿಂತಕರು,  ಸದಾಚಾರ ಸಂಪನ್ನರು, ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳ ಒಡೆಯರಾಗುವ ವಿಪುಲಾವಕಾಶವನ್ನು ತೊರೆದು ಭಗವಂತನ ಆರಾಧಕರಾಗಿ ಎಲ್ಲ ಬಂಧಗಳ ಕೊಂಡಿಯನ್ನು ಕಳಚಿ ಸರ್ವ ತ್ಯಕ್ತರಾದ , ಮಠದ ಶಿಷ್ಯವರ್ಗದ ಸಹೋದರ ಭಾವ ತುಂಬಿದ ಪ್ರೀತಿಯ ಸಂಭಾಷಣೆ, ವೇದ ಮಂತ್ರಗಳ ಸಹಪಠಣ ಎಲ್ಲವು ನನ್ನ ಜೀವನದ ಅತ್ಯಮೂಲ್ಯ   ಘಳಿಗೆಗಳು.
ನಿತ್ಯ ಪ್ರಾರ್ಥನೆಯಿಂದ ಪ್ರಾರಂಭವಾಗಿ ಸಂಜೆಯ ಎರಡು ಗಂಟೆಗಳ ಹೊರಾಂಗಣ ಕ್ರೀಡೆ ಮತ್ತೆ ಸಾಯಂ ಪ್ರಾರ್ಥನೆ. ಸಾಯಂ ಪ್ರಾರ್ಥನೆಯಲ್ಲಿ ನಿತ್ಯವೂ ಬದುಕಲು ಕಲಿಯಿರಿ, ವಿವೆಕಾಂದರ ಸ್ಫೂರ್ತಿ ವಾಣಿ, ವಚನವೇದ ಇತ್ಯಾದಿ ಗ್ರಂಥಗಳ ಆಯ್ದ ಭಾಗಗಳ ಚುಟುಕನ್ನು ಧ್ವನಿವರ್ಧಕದಲ್ಲಿ ಓದಿ ವಿವರಿಸುವ ಭಾಗ್ಯ ನನ್ನದಾಗಿತ್ತು. ನಿತ್ಯವೂ ಪ್ರಶಾಂತ ವಾತವರಣದಲ್ಲಿ ಏಕಾಗ್ರತೆಯಿಂದ ಓದು, ಮಂಜು ಮಹಾರಾಜ್, ಡಾಕ್ಟರ ಮಹಾರಾಜ್, ವಿಷ್ಣು ಮಯಾನಂದಜಿ ಸ್ವಾಮೀಜಿವರ ಪ್ರೋತ್ಸಾಹ ನನ್ನ ಬೆಂಗವಲಾಗಿತ್ತು. ನಾಗೇಂದ್ರ, ಕೋಟೆಮನೆ ಮಂಜು, ಶಿರನಾಲೆ ನಾಗರಾಜ, ಆನಂದ ಹೆಗಡೆ, ಗಣಪತಿ ಹೆಗಡೆ, ಕಿರಣ್, ವಿಶ್ವನಾಥ ಮುಂತಾದ ಆತ್ಮೀಯ ಸ್ನೇಹಿತರ ದಂಡು ಬೇರೆ. ನ್ಯಾಷನಲ್ ಕಾಲೇಜಿನ ಅಧ್ಯಾಪಕರ  ಪ್ರೀತಿ ನನಗೆ ಸ್ಪೂರ್ತಿಯ ಒರತೆಯಾಗಿತ್ತು.
ಹೌದು... ವ್ಯಕ್ತಿಯ ಬಾಹ್ಯ ನಡತೆ ಬಹಿರಂಗದಲ್ಲಿ ಆತನನ್ನ ಚಿತ್ರಿಸುತ್ತದೆ. ಅಂತರಂಗದ ಅಲ್ಲೋಲ ಕಲ್ಲೋಲಗಳು ವ್ಯಾಕುಲ ಮನಸ್ಸಿನ ತುಮುಲಗಳು ರಸಿಕ ಮನಸ್ಸಿನ ಚಪಲಗಳು, ಅಂತರ್ಧಾನಗೊಂಡ ಅಪ್ರಕಟಿತ ಭಾವನೆಗಳು, ಕುಟಿಲತೆ ಕಪಟತೆ ಗಳು ಮಾನವಸಹಜ ಅರಿಷಡ್ವರ್ಗ ಪ್ರೇರಿತ ಚಿತ್ತ ಚಾಂಚಲ್ಯ, ಅಂತರತಮ ಆತ್ಮದ ತಮೋ-ರಜ ಗುಣಗಳು  ಎಲ್ಲವು ಸೇರಿ ವ್ಯಕ್ತಿಯ ಪರಿಪೂರ್ಣ ಅಕಾರವನ್ನು ಬಿಂಬಿಸುತ್ತದೆ...
ಹಾಗಾಗಿ ಯಾವ ಆತ್ಮ ಕಥೆಯು ಪರಪೂರ್ಣವು ಅಲ್ಲ ಸತ್ಯವು ಅಲ್ಲ... ಯಾವ ಜೀವನ ಚರಿತ್ರೆಯು ಟೀಕೆಗೆ ಒಳಗಾಗದೆ ಇಲ್ಲ..
ಆದರೆ ನಾನು ಇಲ್ಲಿ ವ್ಯಕ್ತ ಪಡಿಸಿದುದ್ದು ಒಂದು ವ್ಯಕ್ತಿ ಮಾನವನಾಗಿ ಚೈತನ್ಯ ಪೂರ್ಣನಾಗಿ ರೂಪುಗೊಳ್ಳಲು ಹಿನ್ನೆಲೆ ಅದೆಷ್ಟು ಕಾರಣ?
ಕುವೆಂಪು ಒಬ್ಬ ಅಬ್ರಾಹ್ಮಣ್ಯ ಭಾವನೆಗಳ ಹರಿಕಾರರಗಿದ್ದರು.. ಅವರು ವಿಪ್ರ ದ್ವೇಶಿಯಾಗಿಲ್ಲಡಿದ್ದರು ಸನಾತನ ಆಚರಣೆಗಳ ಕುರಿತಾದ ಅಕ್ರೋಶವಿತ್ತು...   ಹೌದು ನಮ್ಮಲ್ಲಿಂದು ಅನೇಕ ಬುಧ್ಧಿವಂತರು ತಮಗೆ ಅಮೂಲ್ಯ ಜ್ಞಾನದ ದರ್ಶನವನ್ನು ನೀಡಿದ, ತಮ್ಮ ಮೂಲ ವ್ಯಕ್ತಿತ್ವಕ್ಕೆ ಸುಂದರ ರೂಪ ಕೊಟ್ಟ ನಮ್ಮ ಅರ್ಷೆಯ ಪರಂಪರೆ ಸಂಸ್ಕೃತ-ಸಂಸ್ಕೃತಿಯನ್ನು ದೂರಿ ಸಮಾಜದಲ್ಲಿ ತಮಗೊಂದು ವಿಶಿಷ್ಟ  ಸ್ಥಾನವನ್ನು ಪಡೆದಿದ್ದಾರೆ. ಹಣವನ್ನು ಗಳಿಸಿದ್ದಾರೆ. ಪುಸ್ತಕಗಳನ್ನು ಬರೆದಿದ್ದಾರೆ. ಅಂತರ್ಯದಲ್ಲಿ ಎಲ್ಲವನ್ನು ನಂಬಿ ಬಹಿರಂಗದಲ್ಲಿ ಹೊಸ ವಿಚಾರಗಳನ್ನು ವಿಸ್ಫೋಟಕ   ಭಾವನೆಗಳ ಕ್ರಿಯಾಶೀಲತೆಯನ್ನು ಮೆರೆದು ಅಧುನಿಕ ಸಮಾಜದ ಗಣನೆಗೆ ಪಾತ್ರರಾಗಿದ್ದಾರೆ.
ಹೀಗಾಗಿಯೇ ನಾನು ಹೇಳುವುದು. ವ್ಯಕ್ತಿಯ ನಿಜರೂಪ ಆತ ಏರಿದ ಎತ್ತರದಿಂದ ಅಳೆಯಲಾಗದು ಎಂದು.
ಬೌಧ್ಧಿಕ ನಾಯಕತ್ವದ ದಿಗಂತದಲ್ಲಿ ತಾರೆಯರಾಗಿ ಮೆರೆದ ಅನೇಕರು ಮಾನ್ಯರಾದರು. ಇನ್ನನೇಕರು
ಪ್ರಚ್ಚತೆಯಿದ್ದರು ಏರಿದ ಎತ್ತರ ಕಡಿಮೆಯಾಗಿ ಮಂದ ಬೆಳಕಿನ ಮಿಂಚು ಹುಳಗಳಂತೆ ಅಳಿದು ಹೋದರು.
ಮುಂದಿನ ಲೇಖನಕ್ಕೆ ನನಗೆ ಅದೇ ವಸ್ತು.

1 comment:

Narayan Bhat said...

ನಿನ್ನ ನೆನಪಿನ ಕಣಜ ಸಮೃಧ್ಧವಾಗಿದೆ. ಶೇಖರಣೆಯಾಗುತ್ತಾ ಬಂದ ನೆನಪುಗಳೇ ನಮ್ಮ ಮುಂದಣ ಬದುಕನ್ನು ರೂಪಿಸುವ ದಾರಿಕಾರ..ಗುರಿಕಾರ ಅಂತ ನನಗೆ ಅನ್ನಿಸ್ತಾ ಇದೆ.