Saturday, March 13, 2010

ಗೋಹತ್ಯೆ ನಿಷೇಧ -ನನ್ನ ದೃಷ್ಟಿಯಲ್ಲಿ

ಇತ್ತೀಚಿಗೆ ಗೋಹತ್ಯ ನಿಷೇಧ ಚರ್ಚೆಗೆ ಗ್ರಾಸವಾಗುತ್ತಿದೆ. ಪರ-ವಿರೋಧ ಗುಂಪುಗಳು ತಮ್ಮೆಲ್ಲ ಬೌಧ್ಧಿಕ ಸಾಮರ್ಥ್ಯವನ್ನು ಬಳಸಿ ತಮ್ಮ ವಾದದ ಸಮರ್ಥನೆಯಲ್ಲಿ ತೊಡಗಿವೆ

ಯಾವುದು ಸರಿ ಯಾವುದು ತಪ್ಪು ಅನ್ನುವ ವಿಚಾರ ಹಾಗಿರಲಿ, ಜನರ ಧೋರಣೆ ಮಾತ್ರ ವಿಚಿತ್ರವಾಗಿದೆ.

ಕುವೆಂಪುರವರ ಗ್ರಂಥದಲ್ಲಿನ ಅಭಿಪ್ರಾಯವನ್ನು ಉದಾಹರಿಸಿ ಪ್ರಜಾವಾಣಿ ವಾಚಕರ ವಿಭಾಗದಲ್ಲಿ ಗೋಹತ್ಯೆ ನಿಷೇಧ ಶಾಸನವನ್ನು ಬಲವಾಗಿ ಖಂಡಿಸಿದ ಮಾನ್ಯರೊಬ್ಬರು ಸನಾತನ ಧರ್ಮಾಚರಣೆಯ ಕುರಿತು ಕುವೆಂಪು ತಮ್ಮ ವಾಕ್ಪಟುತ್ವದಿಂದ ಸಾಹಿತ್ಯಕ ಶಕ್ತಿಯಿಂದ ಪರಿಣಾಮಕಾರಿಯಾಗಿ ವಿರೋಧಿಸಿದ್ದನ್ನು ಪ್ರಕಟಿಸಿದ್ದರು. ಇದು ನನ್ನನ್ನು ವಿಚಾರಕ್ಕೆ ಹಚ್ಚಿತು.ಕುವೆಂಪುರವರ ಕ್ಷೇತ್ರಕ್ಕೂ ಗೋಹತ್ಯೆ ನಿಷೆಧಿಸುವುದಕ್ಕು ಎಲ್ಲಿಯ ಸಂಬಂಧ? ಸಾಹಿತ್ಯ ಬುದ್ದಿಯ ಚಾತುರ್ಯವನ್ನು ಪ್ರಕಟ ಪಡಿಸುವ, ಭಾವವನ್ನು, ಕಲ್ಪನೆಯನ್ನು ಉದ್ದೀಪನಗೊಳಿಸುವ ಕ್ರಿಯೆ. ಅದು ಸಾಹಿತಿಯ ವಯಕ್ತಿಕ ವಿಚಾರ, ಸೃಷ್ಟಿ.ಕಲ್ಪನೆ.. ಆದರೆ ಗೋಹತ್ಯೆ ಒಂದು ಸಾಮಾಜಿಕ ಕಳಕಳಿ. ಕೃಷಿಯನ್ನೇ ಜೀವನಾಧಾರವಾಗಿ ಅವಲಂಬಿಸಿರುಬ ಭಾರತೀಯನ ಬೆನ್ನೆಲುಬೆ ಗೋ ಸಂತತಿ.... ಗೋ ಜನಿತ ಉತ್ಪನ್ನಗಳು ನಮ್ಮ ಜೀವನಾವಶ್ಯಕ...ಕ್ಷೀರ, ದಧಿ, ಘೃತ ದಿಂದಲೇ ಪಂಚಾಮೃತ...
ದೈವವನ್ನೇ ನಂಬಿ ಜೀವಿಸುವ ಕೋಟ್ಯಾನು ಕೋಟಿ ಭಾರತೀಯರ ಆರಾಧ್ಯ ಮೂರ್ತಿ ನಮ್ಮೆಲ್ಲರ ಆರಾಧ್ಯ ದೈವ ಪ್ರೀತಿಯ ಸಖ ಮುಗ್ಧ ಮಕ್ಕಳಲ್ಲಿ ನಾವುಕಾಣುವ ನಿತ್ಯದೈವ ಶ್ರೀ ಕೃಷ್ಣನಾದರೆ, ಶ್ರೀಕೃಷ್ಣನ ಪ್ರೀತಿಯ ಗೋಮಾತೆಯನ್ನು ಭಗವಂತ ಪ್ರತ್ಯಕ್ಷ ದೈವವಾಗಿ ಭೂಲೋಕದಲ್ಲಿ ನಮಗೆ ಕರುಣಿಸಿದ. ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ  ಶ್ರೀಕೃಷ್ಣನಿಗೆ ಅತ್ಯಂತ ಶ್ರೇಷ್ಠ. ಪ್ರೀತಿ ಕೂಡ.

ಹಿಂದೂ  ಧರ್ಮದಲ್ಲಿ ನಿಶಿಧ್ಧವಾಗಿರುವ ಪಂಚ ಮಹಾ ಪಾತಕಗಳಲ್ಲಿ ಗೋ ಹತ್ಯೆಯು ಒಂದು. [ಸ್ತ್ರೀ ಹತ್ಯೆ, ಭ್ರೂಣ ಹತ್ಯೆ, ಶಿಶು ಹತ್ಯೆ, ಭ್ರಹ್ಮ ಹತ್ಯೆ ಇತರ ಪಾತಕಗಳು ] ಹಿಂದೂ ಧರ್ಮದಲ್ಲಿ ಶ್ರಧ್ಧೆ ಇರುವ ಯಾರೂ ಇದನ್ನು ಒಪ್ಪಲಾರರು. [ವಿಭೂತಿ,  ಜ್ಯೋತಿಷ್ಯಗಳಲ್ಲಿ ನಂಬಿಕೆಯಿರುವಂತೆ  ನಟಿಸುವ  ದೇಶದ ರಾಜಕೀಯ ನಾಯಕರೊಬ್ಬರು ಹತ್ಯೆಯನ್ನು ಸಮರ್ಥಿಸುವುದು ಅವರ ರಾಜಕೀಯ ಪ್ರೇರಿತ ದ್ವಂದ್ವ ನೀತಿಗೆ ಸಾಕ್ಷಿ. ಅವರ ಆಶಾಢಭೂತಿತನಕ್ಕೆ  ಸಾಕ್ಷಿ.  ]

ಭಾವನಾತ್ಮಕತೆ ಬದಿಗಿಟ್ಟರು, ವ್ಯವಹಾರಿಕ ದೃಷ್ಟಿಯಿಂದಲೂ ಗೊಸಂತತಿಯ ಉಳಿವು ಅಗತ್ಯ.

ಸಾವಯವ ಕೃಷಿಯ ಕಚ್ಚಾವಸ್ತು ಸಗಣಿ ಗೊಬ್ಬರ.ರಾಸಾಯನಿಕ ಗೊಬ್ಬರದ ಬಳಕೆಯಿಂದ ಆಗುವ ಅನಾಹುತ ಅಷ್ಟಿಷ್ಟಲ್ಲ ... ಅದಕ್ಕೆ ಸಹಾಯಧನ ಬೇರೆ. ಅದೆಂದೂ ರೈತನನ್ನ ಸ್ವಾವಲಮ್ಬಿಯನ್ನಾಗಿ ಮಾಡಿಲ್ಲ. ಅತ್ತ ಹಣ ಒದಗಿಸಲು ಆಗದೆ, ಇತ್ತ ಹಿಂತೆಗೆಯಲು ಆಗದೆ ನಮ್ಮ ಸರಕಾರಗಳು ರಸಗೊಬ್ಬರದ ಸಹಾಯಧನವನ್ನು ಮುಂದುವರೆಸಿ ಅವೈಜ್ಞಾನಿಕ ಪರಂಪರೆಯನ್ನು ನ್ಯಾಸಗೊಳಿಸಿದ್ದಾರೆ. ರಸಗೊಬ್ಬರ ರೈತನ ಅಸರೆಯಗುವುದರ ಬದಲು ಖಾರ್ಖಾನೆಗಳ ಜೇಬು ತುಂಬುತ್ತಿದೆ. ಹೀಗಿರುವಾಗ ಗೋಹತ್ಯೆಯನ್ನು ಒಂದು ಜನಾಂಗದ ಆಹಾರದ ಸಮಸ್ಯೆಯಾಗಿಯೋ ಇನ್ನೊಂದು ಜನಾಂಗದ ಧಾರ್ಮಿಕ ಭಾವನಾತ್ಮಕ ಕೊಂಡಿಯಾಗಿಯೋ ಪರಿಕಲ್ಪಿಸಿ ತಮ್ಮ ಬೌಧ್ಧಿಕ ಸಾಹಿತ್ಯಕ ಚಮತ್ಕಾರಗಳಿಂದ ಸಮಾಜವನ್ನು ಪ್ರಭಾವಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಗೋಮಾಂಸ ಭಕ್ಷಣೆಯನ್ನು ನಾಸ್ತಿಕತೆಯ ಓರೆಗಲ್ಲಿಗೆ ಹಚ್ಚಿ ಚರ್ಚಿಸಲಾಗುತ್ತಿದೆ. ಆದರೆ ಸಮಾಜ ಕೇವಲ ಸಾಹಿತಿಗಳಿಂದ ಅದುನಿಕ ಬುಧ್ಧಿ ಜೀವಿಗಳಿಂದ ಮಾತ್ರ ತುಂಬಿಲ್ಲ. ಇಲ್ಲಿ ಎಲ್ಲರು ಬೇಕು... ರೈತನು ಬೇಕು... ಧರ್ಮ ಭೀರುಗಳು ಬೇಕು...ಸಾಮಾನ್ಯ ನಾಗರೀಕರು ಬೇಕು, ರಾಜನು ಬೇಕು ಸೇವಕನು ಬೇಕು. ಹೀಗಾಗಿಯೇ ಸಾಹಿತಿಗಳೆಂದು ಸಮಾಜದ ನಾಯಕತ್ವದ ಜವಾಬ್ದಾರಿಯನ್ನು ಯಶಸ್ವಿಯಾಗಿ ಹೊರಲು ಸಾಧ್ಯವಾಗಿಲ್ಲ. ಇಂದಿನ ಸಾಹಿತಿಗಳoತು ಜ್ಞಾನಪೀಠ ಕೊಡಿಸಿದ ರಾಜಾಶ್ರಯಕ್ಕೆ ಕಪ್ಪ ಸಲ್ಲಿಸಲು ತಮ್ಮ ಬುಧ್ಧಿ ಮತ್ತು ಚತುರತೆಯನ್ನು ಮುಡುಪಾಗಿಟ್ಟಿದ್ದಾರೆ .
ಇದಕ್ಕೆ ಪರಿಸರ ಪ್ರೇಮಿ ಸಾಹಿತಿ ಚಿಂತಕ ವಿಜ್ಞಾನಿ ಸುಧಾರಕ ಶಿವರಾಮಕಾರಂತರಂತಹವರ ಚುನಾವಣಾ   ಸೋಲೇ ನಿದರ್ಶನ.
ಸಮಾಜ ಅವರ ಪ್ರತಿಭೆಯನ್ನು ಮೆಚ್ಚಿ ಹೊಗಳಿತು. ಆದರೆ ಲೋಕಸಭೆಯಲ್ಲಿ ಸಮರ್ಥವಾಗಿ ಉತ್ತರಕನ್ನಡದ ಅಭಿವೃಧ್ಧಿಯ ಕುರಿತು ಧ್ವನಿಯೆತ್ತುವ, ವಿವಿಧವರ್ಗಗಳ ನೋವಿನ ಜೊತೆ ಕೇಳುವ ಕಿವಿಯಾಗಿ, ಕೈಹಿಡಿದು ಎತ್ತುವ ಬೆಂಬಲಿಗನಾಗಿ ಅಸ್ಟೇ ಅಲ್ಲದೆ ಇತರ ನಾಯಕರೊಂದಿಗೆ ಸಹಕರಿಸಿ ನಡೆಯುವ ಸಂಯಮಿಯಾಗಿ ಕಾಣಲಿಲ್ಲ... ಜನ ಚಳುವಳಿಗೆ ಕೊಟ್ಟ ಬೆಂಬಲವನ್ನು ಚುನಾವಣೆಯಲ್ಲಿ ಕೊಡಲಿಲ್ಲ.. ಚಳುವಳಿಯೇ ಬೇರೆ ಚುನಾವಣೆಯೇ ಬೇರೆ ಎನ್ನುವುದು ಇದರಿಂದಲೇ ವಿದಿತ.. ರಾಜಕೀಯ ಇಚ್ಚಾ ಶಕ್ತಿ ಮತ್ತು ಬೆಂಬಲವಿದ್ದರೆ ಗೋಹತ್ಯೆ ನಿಷೇಧ ಖಂಡಿತ ಸಾಧ್ಯ.. ವ್ಯಕ್ತಿ ಪೂಜೆಯಲ್ಲಿ ನಿಪುಣರು, ವಿತಂಡ ವಾದಿಗಳು, ಕೇವಲ ಪ್ರಾಕ್ತನರಿಂದ ಯಾವ ಘನ ಸಾಧನೆಯು ಆಗದು.

ಗೋಹತ್ಯೆ ನಿಷೇಧಕ್ಕೆ ನನ್ನ ಹೃತ್ಪೂರ್ವಕ ಬೆಂಬಲವಿದೆ... ಕಸಾಯಿಖಾನೆಯಲ್ಲಿ ಅರೆಯಲ್ಪುಡುವ ಮುದ್ದು ಕರುಗಳನ್ನು ಕಂಡಾಗ ನಮ್ಮ ಮನೆಯ ಕೊಟ್ಟಿಗೆಯ ಪುಟಾಣಿ "ಬೆಳ್ಳಿ" "ಕಾಳಿ" "ಹಂಡಿ""ಚುಂಚಿ""ಪುಟ್ಟಿ" ಗಳ ನೆನಪಾಗದೆ ಇರದೇ?ತಾಯಿಯಿಲ್ಲದ ಮುಗ್ಧ ಕಂದಮ್ಮಗಳಿಗೆ ಅಮೃತ ಸಿಂಚನ ಮಾಡುವ ಸಾಕ್ಷಾತ್ ಮಾತೃ ಸ್ವರೂಪಿ ಯಾಗಿರುವ ಗೋವನ್ನು ತಿಂದು ಆಹಾರ ಮಾಡುವ ಅನಿವಾರ್ಯತೆ ಇದೆಯೇ?

ಗೋಮಾತೆಯನ್ನು ಪೂಜಿಸುವ ಅಸಂಖ್ಯಾತ ಆಸ್ತಿಕ ಬಂಧುಗಳು ತುಂಬಿರುವ ಈ ದೇಶದಲ್ಲಿ ಗೋಹತ್ಯ ನಿಷೇಧದ ವಿರುಧ್ಧ
ಪ್ರತಿಭಟನೆ ನಡೆಯುತ್ತಿದೆ. ಇದು ನಮ್ಮ ಸಂಸ್ಕೃತಿಯ ಅಧೋಪತನಕ್ಕೆ, ಎಲ್ಲವನ್ನು ಲಾಭದ ದೃಷ್ಟಿಯಿಂದಲೇ ಅಳೆಯುವ  ಕೆಟ್ಟ ಸಂಪ್ರದಾಯಕ್ಕೆ, ಭಾವುಕರನ್ನು ನೋಯಿಸಿ ಪೈಶಾಚಿಕ ತೃಪ್ತಿ ಅನುಭವಿಸುವ ಕುಹಕತೆಗೆ ನಿದರ್ಶನ.

ಹೌದು... ಸ್ವೇಚ್ಚಾಚಾರ ವೈಚಾರಿಕತೆಯೆಂಬ ಭ್ರಮೆಯ ಹಿಂದೆ ಅಡಗಿ ಕುಳಿತು ಜನರನ್ನು ಹಾದಿತಪ್ಪಿಸುವ ಮುನ್ನ ನಾವು ಎಚ್ಚೆತ್ತು ನಿಜವಾಗಿಯೂ ಮಾತೆಯಾಗಿರುವ ಗೋವಿನ ನಿಷೇಧದ ಮೂಲಕ ಋಣ ಸಂದಾಯ ಮಾಡೋಣವೆ?

3 comments:

Anonymous said...

ನಿಮ್ಮ ಬರವಣಿಗೆ ಶೈಲಿ ಅದ್ಭುತ.
ತುಂಬಾ practical ಆಗಿದ್ದು ದೊಡ್ಡವರ ದಡ್ಡತನದ ಬಗ್ಗೆ ಅಕ್ರೋಶ ಎದ್ದು ಕಾಣುತ್ತದೆ.
ಇಂತಹ ತಿಳಿದವರ ದ್ವಂದ್ವಗಳಿಲ್ಲದಿದ್ದರೆ ಗೋಹತ್ಯೆ ನಿಷೇಧಕ್ಕೆ ಚರ್ಚೆಯೇ ಬೇಕಿರಲಿಲ್ಲ

PARAANJAPE K.N. said...

ನಮಸ್ಕಾರ, ನಿಮ್ಮ ಲೇಖನ (ಗೋಹತ್ಯೆ ನಿಷೇಧ ದ ಬಗ್ಗೆ) ಓದಿದೆ, ಚೆನ್ನಾಗಿದೆ. ಅ೦ತೆಯೇ ನೀವು ಅವಧಿಯಲ್ಲಿ ಪ್ರತಿಕ್ರಿಯಿಸಿದ್ದನ್ನೂ ಓದಿದೆ. ಅಲ್ಲಿ ನನ್ನ ಲೇಖನವೂ ಪ್ರಕಟ ಆಗಿತ್ತು ( ಸತ್ಯನಾರಾಯಣರ ಲೇಖನಕ್ಕೆ ಸ೦ವಾದಿಯಾಗಿ. ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ನನ್ನ ಬ್ಲಾಗಿಗೂ ಭೇಟಿ ಕೊಡುತ್ತಿರಿ.
www.nirpars.blogspot.com

ಶಿವರಾಮ ಭಟ್ said...

ಮಾನ್ಯ ಪರಾಂಜಪೆಯವರೇ,
ನನ್ನ ಕಿರುಲೇಖನವನ್ನು ಓದಿ ಸ್ಪಂದಿಸಿದ್ದಕ್ಕೆ ಧನ್ಯವಾದ.
ನಿಮ್ಮ ಲೇಖನಗಳಲ್ಲಿ ಕೆಲವನ್ನು ಓದಿದೆ. ನನ್ನ ಭಾವನೆಗಳ ಪ್ರತಿಬಿಂಬದಂತೆ ತೋರುತ್ತಿತ್ತು.
ನನಗೆ ಅತ್ಯಂತ ಸಂತೋಷವಾಯಿತು.
ನಾನು ಕನ್ನಡ ಬರವಣಿಗೆ ಅಸ್ಟೇ ಏಕೆ ಈ ಬ್ಲಾಗ್ ಲೋಕಕ್ಕೆ ಹೊಸಬ.

ನಾವು ಒಟ್ಟಾರೆಯಾಗಿ ಏನನ್ನು ಬೆಂಬಲಿಸುತ್ತೇವೆ ಎನ್ನುವುದನ್ನು ಮೊದಲು ನಿರ್ಧರಿಸಿ
ನಂತರ ಚರ್ಚೆಯನ್ನು ರೂಪಿಸುವುದು ಉತ್ತಮ ಎನ್ನುವುದು ನನ್ನ ಭಾವನೆ.
ಕೇವಲ ನಮ್ಮ ಜ್ಞಾನ ಪ್ರದರ್ಶನ ಇಲ್ಲಿ ಗುರಿಯಲ್ಲ. ಸರಕಾರದ ಕಾನೂನು ಅಸಮರ್ಪಕವಾಗಿರಬಹುದು.
ಅದನ್ನು ಸರಿಪಡಿಸಬಹುದು. ಆದರೆ ಉದ್ದೇಶವನ್ನೇ ಪ್ರಶ್ನಿಸುವುದು ಮೂರ್ಖತನ.
ವಿರೋಧಿ ಭಾವವನ್ನು ಬಹು ರೋಚಕವಾಗಿ ವರ್ಣಿಸಿ ಕೊನೆಯಲ್ಲಿ ವಯಕ್ತಿಕವಾಗಿ ನಾನು ಗೋಹತ್ಯೆ ಸಮರ್ಥಿಸುವುದಿಲ್ಲ ಅನ್ನುವುದು ಸರಿಯಲ್ಲ.
ಒಂದು ತತ್ವ ಅಥವಾ ಸಿಧ್ಧಾಂತಕ್ಕೆ ಬಧ್ಧವಾಗಿದ್ದರೆ ಉತ್ತಮ.
ಪ್ರೀತಿಯ,
ಶಿವರಾಂ