Saturday, April 03, 2010

ಉಷ್ಣ ಕಾಲೇಷು ಶೀತಲಂ.

ನನಗೆ   ಎರಡನೇ  ತರಗತಿಯಲ್ಲಿ  ಉಪನಯನ. ಮೂರನೇ ತರಗತಿಯಲ್ಲಿದ್ದಾಗ ನಮ್ಮ ಮನೆಯ ಜಗುಲಿಯಲ್ಲೇ  ಗುರುಕುಲ ಪದ್ದತಿಯಲ್ಲಿ ವೇದ ಮಂತ್ರ ಪಾಠಶಾಲೆ.    ಅಕ್ಕ ಪಕ್ಕದ ಉಪನಯನವಾದ ಮಕ್ಕಳು ಒಂದೆಡೆಸೇರಿ ಬೇಸಿಗೆ ಮತ್ತು ಚಳಿಗಾಲದ ರಜೆಯನ್ನು ಕಳೆಯುವ ಸಮ್ಮರ್  ಅಥವಾ ವಿಂಟರ್ ಕ್ಯಾಂಪು. ನಮ್ಮೊರಿನ ಭಟ್ಟರೊಬ್ಬರು ನಮಗೆ ಗುರುಗಳು. ನನ್ನ ತಂದೆ ಇಂತಹ ಒಂದು ವ್ಯವಸ್ತೆಯನ್ನು ಕಲ್ಪಿಸಿದ್ದರು. ನಾವೆಲ್ಲ ಬಿಳಿ ಲುಂಗಿ ಕಡವೆ ಶಾಲು ಹೊದ್ದು ಕುರುಡoದಿಗೆ[ದೊಡ್ಡ ರಾಕ್ಷಸ ನೊಣ ]  ಹೊಡೆಯುತ್ತ ಸ್ತೋತ್ರ, ಮಂತ್ರ ಕಲಿಯುತ್ತಿದ್ದೆವು.
ನೆಲ್ಲಿ ಮರ, ಸಂಪಿಗೆಮರ, ಗೇರು ಮರ ಹತ್ತಿ ಹಣ್ಣು ಕಾಯಿ ತಿಂದು ಧುಪಳಿ  ಮಾಡಿ  ಮುಳ್ಳ ಹಣ್ಣು ಕೊಯ್ದು ಅಡಗಿಸಿ ಇಟ್ಟುಕೊಂಡು ಪಾಠ ಹೇಳುವಾಗ ಕದ್ದು ತಿನ್ನುತ್ತಿದ್ದೆವು.

ಭಟ್ಟರ ದಾಸವಾಳದ ಕೋಲು ಹೋರಿಗಳನ್ನು ಹೊಡೆಯಲು ಸದಾ ಸಿಧ್ಧವಿರುತ್ತಿತ್ತು....

ಮಧ್ಯಾನ್ಹ ಊಟ ಮಾಡುವಾಗ ಗ್ರಂಥ ಹೇಳಬೇಕಾಗಿತ್ತು. ಸಂಜೆ ಮತ್ತೆ ಬಾಯಿ ಪಾಠ. ಶಂಕರ ಸಂಹಿತೆಯ

"ಶ್ರೀಮದಖಿಲಾಧಾರನಿಗಮಸ್ತೊಮನಾಯಕ
ಪ್ರಣವ ಪಂಜರದಾಮಹಾಸುಕ
ಮೊದಕಾಂಕಿತ ಪಾಶ  ವರಹಸ್ತಾ...."   ಎಂದು ಭಾಮಿನಿ ಷಟ್ಪದಿಯ ಗಮಕ,

ತನಯರೋಳ್ ಕಾದಿ  ಮೂರ್ಚಿತನಾದ  ರಾಮನಂ
ಮುನಿ ಮೌಳಿ ವಾಲ್ಮೀಕಿ ಬಂದು ಸಂತೈಸುತ್ತ
ಧನುಜಾಶ್ವಮೆಧವಂ ಪೂರೈಸಿ ಸೀತೆಸಹಿತವನಿಯಂ ಪಾಲಿಸಿದರೂ .....

ಎಂದು ವಾರ್ಧಿಕ್ಯ ಷಟ್ಪದಿಯ ಜೈಮಿನೀ ಭಾರತವನ್ನೂ ರಾಗ ಬಧ್ಧವಾಗಿ ಓದಿ ಅರ್ಥ ಹೇಳಬೇಕಾಗಿತ್ತು.
ಕುಮಾರವ್ಯಾಸನ ಈ ಕೆಳಗಿನ ಒಗಟನ್ನು ಬಿಡಿಸಬೇಕಿತ್ತು.

ವೆದಪುರುಷನಸುತನ ಸುತನ
ಸಹೋದರನ ಮೊಮ್ಮಗನ ಮಗನ
ತಳೋದರಿಯ ಮಾತುಳನ  ಮಾವನ ಅತುಳ ಭುಜಬಲದಿ
ಕಾದಿಗೆಲಿದನ ಅಣ್ಣನವ್ವೆಯ
ನಾದಿನಿಯ ಜಟರದೊಳು ಜನಿಸಿದ
ಆದಿ ಮೂರುತಿ ಸಲಹೋ ಗದುಗಿನ ವೀರನಾರಾಯಣ

ನಮ್ಮಲ್ಲಿ ಒಳ್ಳೆಯ ಸ್ಪರ್ಧೆಯು ಏರ್ಪಡುತ್ತಿತ್ತು.
೧ ಗಂಟೆ ಉರು ಹೊಡೆದು ಬೇಜಾರಗುತ್ತಿದ್ದ ನಮಗೆ ನಮ್ಮ ಭಟ್ಟರು ಕೆಲವು ಸಂಸ್ಕೃತದ ಹಾಸ್ಯ ಪದ್ಯ, ಶ್ಲೋಕಗಳನ್ನೂ ಕಲಿಸಿದ್ದರು.
ಕೆಲವು ನೆನಪಿನಲ್ಲಿ ಉಳಿದಿದೆ. ಅರ್ಥ ಬರೆಯಲು ಪುರುಸೊತ್ತಿಲ್ಲ... ಸುಲಭವಿದೆ. ಓದಿ ಎಂಜಾಯ್ ಮಾಡಿ

ಹೆಗ್ಗಂಬಿ ಧೋತ್ರಂ ಹರಟ ಪ್ರಮಾಣಂ
ಹಣೆ ಗೀರು ಗಂಧಂ ಮೊಳ ಉದ್ದ ಟೋಪ್ಯಂ
ಯಥೇಚ್ಛ ಗಡ್ಡಂ ವಿಪರೀತ ದಡ್ದಂ
ಯದ್ವಾಯ ತಡವಾಯ  ವದಂತಿ ಭಟ್ಟ :

[ ಮಂತ್ರ ಗೊತ್ತಿಲ್ಲದೇ ಮದುವೆಯ ಮಂಟಪಕ್ಕೆ ದಕ್ಷಿಣೆಯ ಆಶೆಗಾಗಿ ಮುಂದೆ ಮುಂದೆ ಹೋಗಿ ಕುಳಿತುಕೊಳ್ಳುವ ಬ್ರಾಹ್ಮಣರ ಕುರಿತು ರಚಿತವಾದ ಶ್ಲೋಕವಿದು ]

ಅತ್ಯಾಶ್ಚರ್ಯಂ ವಿಠಲೋಪಾಧ್ಯ    ಗೇಹೇ
ಕಶ್ಚಿದ್ ಚೋರರೂ ಅಟ್ಟದಾ ಮೇಲೆ ಬಂದೂ
ಎಚ್ಚರಿದ್ದವೋ ಇಲ್ಲವೋ ಎಂದು ದೃಷ್ಟ್ವ
ಪಶ್ಚಾದ್ಯಾತಃ ಪೆಟ್ಟಿಗೆ ಹೊತ್ತುಕೊಂಡೂ  

ಈ ಕೆಳಗಿನ ಶ್ಲೋಕ "Gastroenterologist" ರಚಿಸಿದ್ದು...
ಉತ್ತಮಂ ಡುಮುಕೋ   ರಾಯ
ಮಧ್ಯಮೋ ಟರ್ರ ಟುರ್ರಿ
ಅಧಮಂತು ಪುನ್ಗಿನಾದಾಯ
ತೊಂಯಿ ಪುಸುಕು ಪ್ರಾಣ ಘಾತುಕಹ  

ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವ ಅಭ್ಯಾಸವಿಲ್ಲದ ಊರಿನ ದೊಡ್ಡ ಮನುಷ್ಯರೋಬ್ಬರಮೇಲೆ
ನಿರ್ಮಿತವಾದ ಶ್ಲೋಕ...

"*****"ಪಾಲು ಮಹಾಕ್ಷೆತ್ರೆ
"****"ಭಟ್ಟ ಮಹಾಪ್ರಭುಹು
ಆಸನಂ ಭೋಜನಂ ನಾಸ್ತಿ
ಸುಂಣಂ ಕಣ್ಣೀರು ವರ್ಜಯೇತ್

[ ಆಸನ ಕೊಟ್ಟು ಊಟ ಹಾಕುವುದಿರಲಿ ಎಲೆ ಅಡಿಕೆಗೆ ಸುಣ್ಣ ಕೇಳಿದರೆ ಕಣ್ಣೀರು ಬರುವಷ್ಟು ಮಾತನಾಡಿದರು ಅನ್ನುವುದು ತಾತ್ಪರ್ಯ ] 

ಮಾಸಂ ತರತಿ ಇತಿ ಮಾಸ್ತರಹ : ತಿಂಗಳನ್ನು ಲೆಕ್ಕ ಹಾಕುವವ ಯಾವನೋ ಅವನೇ ಮಾಸ್ತರ.

ಅನೆಕಾನಿ ವ್ಯತೀತಾನಿ
ಜನ್ಮಾನಿ ತವ "charju" ನಾ.

ಅನೇಕಜನ್ಮಗಳು ಕಳೆದರು ನಿನಗೆ ನೌಕರಿ ಸಿಗಲ್ಲಿಲ್ಲವಲ್ಲೋ ಅನ್ನುವ ಅರ್ಥದಲ್ಲಿ ಭಗವದ್ಗೀತೆಯ ಶ್ಲೋಕವನ್ನು ತಿರುಚಲಾಗಿತ್ತು.

ಮಂತ್ರಾಕ್ಷತೆಯ ಸಂದರ್ಭದಲ್ಲಿ ಹೇಳುವ ಮಂತ್ರ...
ತಾಮ್ಬೂಲಾನಿ ಪಾಂತು. ಐಶ್ವರ್ಯಮಸ್ತು. ತಂಡುಲಾನಿ ಪಾಂತು ಬ್ರಾಹ್ಮನ್ರಿಂಗ್ ಚಾನ್ಸು...

ಮದುವೆಯಲ್ಲಿ ಸಭಾಪೂಜೆ ಮಂತ್ರದಲ್ಲಿ ಹಾಸ್ಯ ಹೊಕ್ಕಾಗ!!

"ಬ್ರಾಹ್ಮಣೆಭ್ಯೋ ಮಹದ್ಭ್ಯಶ್ಚ ಓಡಿಬಿದ್ನೋ ಮಹೇಶ್ವರಹ
ಪುರಾಣ ಶಾಸ್ತ್ರ ವಿದ್ಭ್ಯಶ್ಚ ಸರ್ವೆಭ್ಯೋ ವೈ ನಮೋ ನಮಃ  

ದೊಡ್ಡ ಹೆಡ್ಡ ಗೌಡನಮನೆಯಲ್ಲಿ ನಾಯಿ ೫ ಮರಿಹಾಕಿದ್ದಕ್ಕೆ ಶಾಂತಿ ಮಾಡಿಸುತ್ತ ಭಟ್ಟರು ಗೌಡನಿಗೆ ತಿಳಿಯದ ಹಾಗೆ ಬೇರೆ ಭಟ್ಟರಿಗೆ ಹೇಳಿದ ಮಂತ್ರ
ಹೆಡ್ಡಸ್ಯ  ದೊಡ್ಡ ಗೌಡಸ್ಯ ಪಂಚಕುನ್ನಿ ಪ್ರಸೂಯತಹ 
ಮಮಪ್ಯರ್ಧಂ ತವಪ್ಯರ್ಧಹ ಸ್ವಾಹಾ  [ ಬಂದ ಲಾಭದಲ್ಲಿ ನಿಮಗರ್ಧ ತಮಗರ್ಧ ]

ರುದ್ರ ಮಂತ್ರದಲ್ಲಿ ಬರುವ ಒಂದು ಸಾಲು ನಮ್ಮ  ಸಹಪಾಟಿಯಾ ನಾಲಗೆ ತಿದ್ದದೆ, ಸರಿಯಾಗಿ ಓಡದೆ  ಹೀಗಾಗಿತ್ತು.
"ದಿವಿತಿಷ್ಟತ್ಯೆ ಕಸ್ತೆ ನೇದಂ ಪೂರ್ಣಂ ಪುರುಷೆಣ  ಸರ್ವಂ" ಅನ್ನೋದು ಉಪ್ಪುತಿಂದ ಬಾಯಲ್ಲಿ ಈ ರೀತಿ ವ್ಯತ್ಯಾಸವಾಗುತ್ತಿತ್ತು.
"ದಿವಿತಿಷ್ಟತ್ತಿಗೆ  ಕಚ್ಚೆನೇದಂ ಪೂರ್ಣಂ  ಪುರುಷೆಣ  ಸರ್ವಂ".ಕೇಳಿಕೊಂಡ ಭಟ್ಟರ ಹತ್ರ ದಾಸವಾಳದ ಶೇಳೆಯಿಂದ "ತಾಡನಂ ಪರಮೌಷಧಂ" ಎಂದು  ಚೆನ್ನಾಗಿ ತಿಂದಿದ್ದು ನೆನಪಿದೆ. ಈ ಮಂತ್ರದ ಹನಸು ಬಾಯಿಪಾಟ  ಆಗುವವರೆಗೂ, ನಗು ತಡೆಯಲು ಆಗುತ್ತಿರಲಿಲ್ಲ.

ಇನ್ನು ರಸಿಕತೆಯ ರಸ ತುಂಬಿರುವ ಅದೆಷ್ಟೋ ಕಾವ್ಯಕುಸುಮಗಳನ್ನು ನಮ್ಮ ಕರ್ಣದ  ಮೇಲೆ ಸಿಕ್ಕಿಸಿದ್ದರು....
ಕಾಲೇಜು ಜೀವನದಲ್ಲಿ ನನ್ನ ರೂಮು ಆಕರ್ಷಣೆಯ ಕೇಂದ್ರವಾಗಲು ಇಂತಹ ಸಂಗ್ರಹಗಳ ಪಾಲು ಸಾಕಿಷ್ಟಿದೆ.
ಈ ಸುಭಾಷಿತ ವನ್ನೇ ನೋಡಿ ಇದೊಂದು sample ಅಷ್ಟೇ.

ಕೂಪ ವಾರಿ ವಟಚ್ಚಾಯ
ತಾಂಬೂಲಂ ತರುಣೀಸ್ತನಂ
ಶೀತಕಾಲೆ ಭವೆದ್ಯುಶ್ಣಂ
ಉಷ್ಣ ಕಾಲೇಷು ಶೀತಲಂ.

"ನಿತ್ಯಾನಂದಕರೀ ವರಾ ಭಯಕರಿ" ಅನ್ನುವ ಸ್ತೋತ್ರದ ಶೈಲಿಯ ಕಿಲಾಡಿಗಳ ಶ್ಲೋಕ

ನಿತ್ಯಾನಂದಕರಿ ಹಳೆ ಮನೆಕರಿ
ಬೇಕಷ್ಟು ಪಾಯಸಾ ಸುರೀ
ಗೊಡ್ಡೆಮ್ಮೆ  ಕಾಲ್ಕಟ್ಟಿ ಹಾಲನು ಕರಿ
ಜೋರಿದ್ದ ಕುನ್ನೀ ಮರಿ
ನಮ್ಮೂರ ಕಾಯ್ಕಳ್ಳು ಶಿದ್ದೀ ಮರಿ
ಓಡಿ ಹೋಗಿ ಕಾಲಾ ಮುರಿ...


ಒಂದು ಚಳಿಗಾಲದ  ರಜೆಯಲ್ಲಿ ಮನೆಯ ಪಕ್ಕದ ದೇವಸ್ತಾನದಲ್ಲಿ ಮೂರ್ತಿ ಪ್ರತಿಷ್ಠೆ ಕಾರ್ಯಕ್ರಮ. ಗೋಕರ್ಣದಿಂದ ಸುತ್ತಲಿನ ಊರಿನಿಂದ ಬಂದ ವೈದಿಕರಿಗೆ ನಮ್ಮ ಮನೆಯಲ್ಲಿ ವಸತಿ ವ್ಯವಸ್ತೆ.
ಸ್ನಾನಕ್ಕೆ ಹೊರಗೆ ದೊಡ್ಡ ಕೊಪ್ಪರಿಗೆಯಲ್ಲಿ ಬಿಸಿನೀರು ಕಾಯಿಸಿ ಇಡುತ್ತಿದ್ದೆವು. ಬೆಳಿಗ್ಗೆ ಬೇಗಲೇ ಪ್ರಾರಂಭವಾಗುವ ಕಾರ್ಯಕ್ರಮ.
ಎಲ್ಲರು ಮಡಿ ಉಟ್ಟು ಸಿಧ್ಧವಾಗಿರಬೇಕಗಿತ್ತು. ನಾನು - ಅಣ್ಣ   ವೈದಿಕರ ಸೇವೆಗೆ ಸ್ವಯಂ ಸೇವಕರು.
ಆದರೆ ನಾವು ನಿರೀಕ್ಷಿಸದ ಒಂದು ಸಮಸ್ಯೆ ಎದುರಾಗಿತ್ತು. ಹತ್ತಿಪ್ಪತ್ತು ವರ್ಷಗಳಲ್ಲಿ ಒಮ್ಮೆಯೂ ನಡೆಯದಿದ್ದ ಈ ಅದ್ಭುತ ದೇವಕಾರ್ಯಕ್ಕೆ
ಸುತ್ತಲಿನ ಊರುಗಳಿಂದ ಧಾರವಾಡ ಪೊಲೀಸರು ಬಂದಿದ್ದರು. [ ಬಿಳಿ ಸೀರೆ ಉಟ್ಟು ಅತ್ಯಂತ ಶ್ರಧ್ಧೆಯಿಂದ ಪೂಜೆ ಪುನಸ್ಕಾರ ಮಾಡುವ ಆಗಿನ ಕಾಲದ ನಮ್ಮ ಕಡೆಯ ವಯೋವೃಧ್ಧ ವಿಧವೆಯರಿಗೆ ನಾವು ಇತ್ತ ಕೋಡ್ ವರ್ಡ್ ]. ಬೆಳ್ಳಕ್ಕಿ ಮರಿಗಳಂತೆ ಬಂದು ಸೇರುವ ಗುಂಪು ನಮಗಿಂತ ಬೇಗಲೇ ಎದ್ದು ಕೊಪ್ಪರಿಗೆ ನೀರನ್ನು ಖಾಲಿ ಮಾಡುತ್ತಿದ್ದರು.ಅಷ್ಟೇ ಅಲ್ಲದೆ ನಮ್ಮ ಮನೆಯಲ್ಲಿ ವೈದಿಕರ ಸಂಧ್ಯಾ ವನ್ದನೆಗೆ ಇತ್ತ ತಾಮ್ರ, ಹಿತ್ತಾಳೆಯ ಚಂಬುಗಳು ಮಾಯವಾಗಿ ಗುಡ್ಡೆಯ [ ಅಡವಿ, ಕಾಡು ]ಮೇಲೆ ಪ್ರವಾಸ ಹೋಗುತ್ತಿದ್ದವು. ಕೊಪ್ಪರಿಗೆಯ  ಪಕ್ಕದಲ್ಲಿ
tear ಅಂಡ್ wear   ಗಳ ಹಾವಳಿ ಬೇರೆ... ಇದಕ್ಕೆ ಬಂದಿರುವ ವೈದಿಕರಲ್ಲೊಬ್ಬರು ಚತುರ ಉಪಾಯವೊಂದನ್ನು ಹೇಳಿಕೊಟ್ಟ ಮೇಲೆ  ಸಮಸ್ಯೆ ಬಗೆಹರಿದಿದ್ದು.ಒಂದಷ್ಟು ಅವಲಕ್ಕಿ ತಂದು ಕೊಪ್ಪರಿಗೆಯ ಸುತ್ತ ಹಾಕಿದ್ದೆವು. ಅನ್ನವೆಂದು ಭ್ರಮಿಸಿದ ಬೆಳ್ಳಕ್ಕಿ ತಂಡ ಮುಸುರೆ ಭಯದಿಂದ ಮರುದಿನದಿಂದ ಮಾಯಾ.ಒಂದೆರಡು "tear ಅಂಡ್ wear"  ಮೇಲೆ ಬೂದಿ ಬೇರೆ ಹಾಕಿದ್ದೆವು.

ಈ "tear ಅಂಡ್ wear" ಅಂದ ತಕ್ಷಣ  ಮತ್ತೊಂದು ನೆನಪಾಯ್ತು.
ನಮ್ಮೊರ ಗಂಡಿನ ಮದುವೆ ಇತ್ತು. ಬೇರೆ ದೂರದ ಊರಿನ ಹೆಣ್ಣು.ಹೆಣ್ಣಿನ ಮನೆಯಲ್ಲೇ ಮದುವೆ.  ಆ ಊರನ್ನು ನೋಡುವ ಆಸೆಯಿಂದ ತುಂಬಾ ಜನ ದಿಬ್ಬಣದ ಜೊತೆಯಲ್ಲಿ ಹೊರಟಿದ್ದರು. ಬೇರೆ ಊರಿನ ವಿವಾಹಕ್ಕೆ ಹೋದಾಗ ಅಕ್ಕ ಪಕ್ಕದ ನಡೆದು ಹೋಗಬಹುದಾದ ಮನೆಗಳಿಗೂ ಭೇಟಿ ಕೊಡುವುದು ಜನರ [ದುರ್ ] ಅಭ್ಯಾಸ. ಹಳ್ಳಿಯಲ್ಲಿ ಸಾಮಾನ್ಯವಾಗಿ ಮನೆಗೆ ಬಂದವರಿಗೆ ಆಸರಿಗೆ ಕೊಡುವುದೂ ರೂಢಿ. ಚಳಿಗಾಲವಾದರೆ ಚಹಾ. ಬೆಸಿಗೆಯಾದರೆ ನಿಂಬೂ ಪಾನಕವೋ [ ಇತ್ತೀಚಿಗೆ ಕೋಕಂ ] ಮಜ್ಜಿಗೆಯೋ ಕೊಡುವುದು ಪದ್ಧತಿ.
ಹೀಗೆ ಒಂದಷ್ಟು ಜನ ಸೇರಿಕೊಂಡು ಮದುವೆ ಮನೆಯ ಪಕ್ಕದ ಮನೆಗೆ ಹೋಗಿದ್ದರಂತೆ. ಮನೆಯಲ್ಲಿ ೧೪-೧೫ ವರ್ಷದ ಹುಡುಗಿ ಒಬ್ಬಳೇ ಇದ್ದಳು. ಅವಳ ಜೊತೆಯಲ್ಲಿ ೭೦-೭೫ ವರ್ಷದ ಧಾರವಾಡ ಪೋಲಿಸು ಅಂದರೆ ಹುಡುಗಿಯ ಅಜ್ಜಿ. ಅಜ್ಜಿ ದೇವರ ಕೊನೆಯಲ್ಲಿ ರಾಮ ರಾಮ ಅನ್ನುತ್ತ ಪೂಜೆ ಮಾಡುತ್ತಿದ್ದರು. ಹುಡುಗಿ ಮನೆಗೆ ಬಂದ ಜನಕ್ಕೆ ಬಿಸಿ ಬಿಸಿ ಚಹಾ ತಂದು ಕೊಟ್ಟಳು. ತಿನ್ನಲು ಹಲಸಿನ ಚಿಪ್ಸು.ಕಾಯಿ ಹಲ್ವ...
ಹೋಗಿದ್ದ ಜನ ಹೊರಗೆ ಕುಳಿತು ಸುದ್ದಿ ಹೇಳುತ್ತಾ ಇರುವಾಗ ಅಜ್ಜಿ ಮತ್ತು ಮಗಳ ನಡುವಿನ ಈ ಸಂಭಾಷಣೆ ಹೊರಗಿದ್ದವರಿಗೆ ಕೇಳುತ್ತಿತ್ತು.

ಅಜ್ಜಿ: ಕೂಸೇ ಬಂದವಕೆ ಆಸರಿಗೆ  ಕೊಟ್ಯ?
ಮೊಮ್ಮಗಳು: ಹೌದು. ಚಾ ಕೊಟ್ಟೆ.
ಅಜ್ಜಿ: ಚಾ ಎಂತದರಲ್ಲಿ ಅರಿಸಿದೆ? [ ಅರಿಸು -ಫಿಲ್ಟರ್ ಮಾಡು ]
ಮೊಮ್ಮಗಳು: ಅಲ್ಲೇ ಓಲೆ ಹತ್ರ ಇದ್ದ ಅರಿವೆಯಲ್ಲಿ. ಚಾ ಫಿಲ್ಟರ್ ಹುಡುಕಿದರು ಸಿಕ್ಕಿದ್ದಿಲ್ಲೇ
ಅಜ್ಜಿ: ಥೋ ಕೂಸೇ ಅಯ್ಯೋ ಅದು ಎನ್ಕೆ ಮಾಲೆಯ.. ಇಲ್ಲೆ ಓಲೆ ಹತ್ರ ಒಣಗಿಸುಲೇ ಇದ್ದ ಎನ್ನ ಮಾಲು ಕಾಣುತ ಇಲ್ಲೆ....

ಹೊರಗೆ ಕುಳಿತವರ ಪರಿಸ್ಥಿತಿ ಹೇಗಿತ್ತೋ ಯಾರು ನನಗೆ ಹೇಳಿಲ್ಲ.

ಈಗ tear ಅಂಡ್ wear ಬಿಸಿನೆಸ್ ತುಂಬಾ ಡೌನ್ ಆಗಿದೆ. ಹಳೆ ಮನೆಗಳಲ್ಲಿ ಭತ್ತದ ಪಣತದ ಮೂಲೆಯಲ್ಲಿ, ಹೂವಿನ ಗಿಡಗಳ ಮೇಲೆ ಅಲಂಕಾರಿಕವಾಗಿ ಬಣ್ಣ ಬಣ್ಣಗಳಲ್ಲಿ   ಕಾಣ ಸಿಗುತ್ತಿದ್ದ ಈ ಪುರಾತನ ವಸ್ತು ನಶಿಸಿಯೇ ಹೋಗಿದೆ.

ಓದುಗರಲ್ಲಿ ವಿನಂತಿ: ಇದು ಹಾಸ್ಯಕ್ಕಾಗಿ ಮಾತ್ರ ಬರೆದದ್ದು. ಯಾರನ್ನೂ ಗೇಲಿಮಾಡುವ ಉದ್ದೇಶ ಇದಕ್ಕಿಲ್ಲ. ಅಷ್ಟೇ ಅಲ್ಲದೆ ಕರೆಯದೆ ಬರುವ ಅನಾಗರೀಕತೆ, ಕೆಲವೊಮ್ಮೆ ನಮ್ಮನ್ನು ತೀರ ಹಿಂಸೆಗೆ ಗುರಿ ಮಾಡುವ ಬೆಳ್ಳಕ್ಕಿಗಳು ನಮ್ಮಲ್ಲಿದ್ದರು. ಅವರ ಅಸಹಾಯಕತೆಗೆ ನಮಗೆ ವಿಶಾದವಿದ್ದರು ಸಂಕುಚಿತ ಮನೋಭಾವಕ್ಕೆ ಸಿಟ್ಟು ಕೂಡ ಇದೆ.  ಆಗ ಚಿಕ್ಕ ಬಾಲಕನಾಗಿದ್ದ ನನಗೆ ಆದ ತೊಂದರೆ ಕೂಡ ಅಷ್ಟಿಷ್ಟಲ್ಲ.

ಕಟಿಣ ಪದಗಳ ಅರ್ಥ.
tear ಅಂಡ್ wear - "ರಾಮ  ಭಾಮ ಶ್ಯಾಮ" ಸಿನಿಮಾ  ನೋಡಿ





[ "^ಸ್" ]

2 comments:

ಚುಕ್ಕಿಚಿತ್ತಾರ said...

ರಸವತ್ತಾಗಿದೆ ನಿಮ್ಮ ಲೇಖನ...:)
ನಮ್ಮ ಕಡೆ ಈ ಚೂರ್ಣೀಕೆ ಬಹಳ ಫೇಮಸ್ಸು...

ಸೀರೆ ತನ್ನಿರಿ ಎ೦ದ್ರೆ ಈ ವರ್ಷ ಅಡಿಕೇಗೆ ದಾರ್ಣಿಲ್ಯಡಾ...
ಚೂರೇ ಚಿನ್ನವ ಕೇಳ್ದ್ರೂ ಸಾಲವನ ಈಗ್ಮ೦ಡಿಲ್ ಕೊಡ್ತ್ವಲ್ಯಡಾ...
ಮಾರೀ ಜಾತ್ರೆಗೆ ಹೋಪನಾಎ೦ದ್ರೆ ಪುರ್ಸೊತ್ತೆ ಆಗ್ತಲ್ಯಡಾ..
ಯಾರೀಗ್ಬೇಕಿವರ೦ತ ಗ೦ಡೊಡನೆ ಬಾಳ್ ಶ್ರೀ ಶ೦ಬು ಲಿ೦ಗೇಶ್ವರಾ...

Pratima said...

Lekhana tumba chennagide. Ee melina comment nalliruva choornike kooda vinodakaravagide.