Wednesday, May 25, 2011

ಚದುರಂಗ

ಚದುರಂಗ - ಚೆಸ್


[ ಕೃಪೆ - ವಿಕಿಪೀಡಿಯ] 

ಚದುರಂಗ ನನ್ನ ಪ್ರೀತಿಯ ಹವ್ಯಾಸ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕಾರ್ಪೋರೆಟ್ ಚೆಸ್ನಲ್ಲಿ ನಮ್ಮ ೪ ಜನರ ತಂಡ ವಿಜಯಿಯಾಗಿ ಹೊರಹೊಮ್ಮಿದೆ. ವಿಪ್ರೋ, ಇನ್ಫೋಸಿಸ್, ಕೋಗ್ನೈಝಾಂಟ್, ಸ್ಯಾಮ್ಸಂಗ್, ಫಿಲಿಪ್ಸ್, ಟಾಟಾ ಎಲೆಕ್ಷಿ, ಟಿ ಸಿ ಎಸ್ಸ್, ಮೈಂಡ್ ಟ್ರೀ ಹೀಗೆ ಹಲವಾರು ಬೃಹತ್ ಕಂಪನಿಗಳ ತಂಡಗಳೊಡನೆ ಸೆಣಸಿ ನಾವು ಸರ್ವಾಗ್ರಣಿ ಗಳಾಗಿದ್ದು ಹೆಮ್ಮೆ. ಹವ್ಯಾಸಕ್ಕಾಗಿ ಆಡುವ ಕ್ರೀಡೆಗೂ ಟೂರ್ನಮೆಂಟ್ನಲ್ಲಿ ಆಡುವ ಆಟಕ್ಕೂ ಬಹಳ ಅಂತರವಿದೆ. ಟೂರ್ನಮೆಂಟ್ ಆಟಕ್ಕೆ ಸಮಯ ನಿಗದಿಗೊಲಿಸಲಾಗುತ್ತದೆ. ಚೆಸ್ಸ್ ಆಟಕ್ಕೆಂದೇ ತಯಾರಿಸಲಾದ ಆಧುನಿಕ ಗಡಿಯಾರ ಬಳಸಲಾಗುತ್ತದೆ. ಆಟದ ಫಲಿತಾಂಶ ಸಮಯದ ಆಧಾರದ ಮೇಲೆಯೂ ನಿರ್ಧಾರವಾಗಬಹುದು. ಯಾವ ಆಟಗಾರನ ಸಮಯ ಮೊದಲು ಮುಗಿದು ಹೋಗುತ್ತದೋ ಅವನು ಸೋಲುತ್ತಾನೆ. ಚದುರಂಗದ ಫಲಕದಲ್ಲಿ ಗೆಲ್ಲುವ ಎಲ್ಲ ಸಾಧ್ಯತೆಗಳಿದ್ದರೂ ಸಮಯ ಮುಗಿದರೆ ಸೋಲೇ ಗತಿ.

ಇನ್ನು ಟೂರ್ನಮೆಂಟ್ ಆಟದ ಇತರ ಮಾಹಿತಿಗಾಗಿ "ಫಿಡೆ" ಅಂತರ್ಜಾಲ ತಾಣವನ್ನು, ವಿಕಿ ಪೀಡಿಯ, ಅಥವಾ ಚೆಸ್ ಡಾಟ್ ಕಾಮ್ ನಂತಹ ಆಕರವನ್ನು ತೆರೆದು ನೋಡಬಹುದು. ಇಲ್ಲಿ ಚದುರಂಗದ ಬಗೆಗೆ ವಿಸ್ತೃತ ಮಾಹಿತಿ ಲಭ್ಯ. ಆಟದ ಮೂಲಭೂತ ನಿಯಮಗಳು, ಚದುರಂಗದ ಚರಿತ್ರೆ, ಜಗತ್ತಿನಾದ್ಯಂತ ಇರುವ ಆಟಗಾರರ ಶ್ರೇಣಿ, ಲಭ್ಯವಿರುವ ಪುಸ್ತಕಗಳು ಹೀಗೆ ನಿಮಗೆ ಬೇಕಾದ ಮಾಹಿತಿಯನ್ನು ನೀವೇ ಹುಡುಕಿ ಪಡೆಯಬಹುದು. ಆಡುವ ಉತ್ಸುಕತೆ ಇದ್ದರೆ ಗಣಕದೊಂದಿಗೋ ಅಥವಾ ಜಗತ್ತಿನ ಮೂಲೆ ಮೂಲೆಯಲ್ಲಿರುವ ಇನ್ನೊಬ್ಬ ಆಸಕ್ತನೊಂದಿಗೆ ಆಡಲೂಬಹುದು.



ಚದುರಂಗ ಉಳಿದ ಕ್ರೀಡೆಗಳಿಗಿಂತ ಭಿನ್ನ. ಚೆಸ್ಸಿಗೆ ನಿಖರ ಹಾಗು ಸಮಂಜಸವಾದ ವೀಕ್ಷಕ ವಿವರಣೆ ನೀಡುವುದು ಬಹಳ ಕಷ್ಟ. ಯಾಕೆಂದರೆ ಪ್ರತಿಯೊಂದು ಆಟವು ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಅಪಾರ ನಡೆಗಳ ಸಂಭವನೀಯತೆಯನ್ನು ಸೃಷ್ಟಿಸುತ್ತಿರುತ್ತವೆ. ಪ್ರತಿಯೊಂದು ಕಾಯಿಯ ಚಲನೆಯೂ ವಿಶಿಷ್ಟವಾದ ದೃಷ್ಟಿಕೋನದ ನಿರ್ದಿಷ್ಟ ತಾರ್ಕಿಕ ಹಾಗು ತಾಂತ್ರಿಕ ವಿಶ್ಲೇಷಣೆಯ ಹಿನ್ನೆಲೆಯುಲ್ಲದ್ದು. ಒಂದೊಂದು ಆಟಗಾರನ ವಿಧಾನ, ಯುಕ್ತಿ, ಆಟವನ್ನು ಬೆಳೆಸುವ ರೀತಿ ಮತ್ತು ಎದುರಾಳಿಯನ್ನು ವಿಚಲಿತಗೊಳಿಸುವ ತಂತ್ರಗಾರಿಕೆ ಬೇರೆಯೇ ಇರುತ್ತದೆ. ಒಬ್ಬ ಹವ್ಯಾಸಿಯ ಆಟಕ್ಕೂ ಮತ್ತು ವೃತ್ತಿಪರ ಆಟಗಾರನಿಗೂ ಬಹಳ ಅಂತರವಿರುತ್ತದೆ. ಹವ್ಯಾಸಿಯ ನಡೆಗಳೆಲ್ಲ ಯಾನ್ತ್ರಿಕವಾಗಿರಬಹುದು. ಯಾವುದೇ ಸಿಧ್ಧಾಂತ ಅಥವಾ ಗುರಿಯನ್ನು ಹೊಂದಿರದ ಆಳವಾಗಿ ವಿಶ್ಲೆಶಿಸಲ್ಪತ್ತಿರದ ಸರಳ ಆಟ ಅದಾಗಿರಬಹುದು. ಇಂತಹ ಹವ್ಯಾಸಿಗಳನ್ನು ವೃತ್ತಿಪರರು ಸುಲಭವಾಗಿ ಮಣಿಸಬಹುದು.



ವೃತ್ತಿಪರರು ಚೆಸ್ಸ್ ಆಟದ ಅನೇಕ ಸಿದ್ಧಾಂತಗಳನ್ನು ಕರಗತ ಮಾಡಿಕೊಂಡಿರುತ್ತಾರೆ. ಒಬ್ಬ ನಿಪುಣ ಆಟಗಾರ ಕನಿಷ್ಠ ೮-೧೦ "ಪ್ರಾರಂಭಿಕ ಸಿಧ್ಧಾಂತಗಳ" ಎಲ್ಲ ಮಜಲುಗಳನ್ನು ಎಲ್ಲ ಪ್ರಾಕಾರಗಳನ್ನು ಅಭ್ಯಸಿಸಿರುತ್ತಾನೆ. ಪ್ರತಿಯೊಂದು ಸಿದ್ಧಾಂತದ ಬಲಿಷ್ಠ ಹಾಗು ದುರ್ಬಲ ನಡೆಗಳ ಅರಿವು ಮತ್ತು ಎದುರಾಳಿಯು ಆಟದ ಆರಂಭ ಹಾಗು ವಿಕಸನ ಸೂತ್ರಗಳಿಗೆ ವಿರುಧ್ಧವಾದ ದುರ್ಬಲ ನಡೆಯನ್ನು ಮುಂದಿಟ್ಟಾಗ ತಕ್ಷಣ ಆಟವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ನೈಪುಣ್ಯತೆ ಅವನಿಗೆ ಸಿಧ್ಧಿಸಿರುತ್ತದೆ. ಪ್ರತಿಯೊಂದು ನಡೆಯಲ್ಲೂ ಆತನ ಯೋಜಿತ ತಂತ್ರಗಾರಿಕೆಯನ್ನು ಕಾಣಬಹುದು.



ಶತಮಾನಗಳ ಇತಿಹಾಸವಿರುವ ಈ ಕ್ರೀಡೆ ನಿರಂತರ ಸಂಶೋಧನೆಗೆ ಒಳಪಟ್ಟಿದೆ. ಚೆಸ್ಸ್ ಪಂಡಿತರು ಲಕ್ಷಾಂತರ ಆಟಗಳನ್ನು ವಿಮರ್ಶಿಸಿ ಹೊಸ ಹೊಸ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಅನೇಕ ಪರಿವರ್ತನೆಗನ್ನು ಆಟದಲ್ಲಿಯೂ ತಂದಿದ್ದಾರೆ. ಇವೆಲ್ಲ ಮಾಹಿತಿ ಇರುವ ಉತ್ತಮ ಪುಸ್ತಕಗಳೂ ಲಭ್ಯವಿದೆ. ಚದುರಂಗದಲ್ಲಿ ಆಸಕ್ತಿ ಇರುವ ಹವ್ಯಾಸಿಗಳು ವೃತ್ತಿಪರ ಗ್ರಾಂಡ್ ಮಾಸ್ಟರ್ ಗಳ ಹಾಗೆ ತಮ್ಮ ಆಟವನ್ನು ಸುಧಾರಿಸಿಕೊಳ್ಳಬಹುದು. ಇಂತಹ ಗ್ರಾಂಡ್ ಮಾಸ್ಟರ್ ಗಳಿಂದ ತರಬೇತಿ ಸಿಕ್ಕಿದ್ದಲ್ಲಿ ಮಕ್ಕಳು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕೂಡ ಹೆಸರು ಗಳಿಸಬಹುದು. ಮಕ್ಕಳ ಬೌಧ್ಧಿಕ ಸಾಮರ್ಥ್ಯಕ್ಕೆ ಸವಾಲು ಹಾಕುವ ನಿತ್ಯ ನೂತನವಾಗಿ ಬೆಳೆಯುತ್ತ ಮನಸ್ಸಿಗೆ ನವೋಲ್ಲಾಸ ನೀಡುತ್ತ ನವ ನವೀನ ತಂತ್ರಗಳನ್ನು ಸಂಸ್ಫುರಿಸುವ ಅತ್ಯಧ್ಭುತ ಒಳಾಂಗಣ ಕ್ರೀಡೆ.



ಕನ್ನಡ ವಿ ಕಿ ಪೀಡಿಯಾ ದಲ್ಲಿ ಚದುರಂಗದ ಕುರಿತಾದ ಚಿತ್ರ ಸಹಿತ ಮಾಹಿತಿ ಇದೆ. ಚದುರಂಗದ ನಿಯಮಗಳ ಉತ್ತಮ ವಿವರ ಕೂಡ ಇದೆ.

ಆದರೆ ಆಟವನ್ನು ಗೆಲ್ಲಲು ಅನುಸರಿಸಬೇಕಾದ ಕೆಲವು ಉಪಾಯಗಳ ಸಂಕ್ಷಿಪ್ತ ವಿವರ ಕೂಡ ಅಲಭ್ಯ. ಇಂಗ್ಲಿಷ್ ಭಾಷೆಯ ವಿ ಕಿ ಯಾ ಭಾಷಾಂತರ ಮಾತ್ರ ಕನ್ನಡದಲ್ಲಿ ದೊರಕಿಸಲಾಗಿದೆ.

ಚದುರಂಗದ ಕಿರು ಪರಿಚಯಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಬಳಸಿ.

http://kn.wikipedia.org/wiki/ಚದುರಂಗ_(ಆಟ)

ನಿಯಮಗಳಿಗಾಗಿ

http://kn.wikipedia.org/wiki/ಚದುರಂಗದ_ನಿಯಮಗಳು

ಇಂಟರ್ನೆಟ್ನಲ್ಲಿ ಆಟವನ್ನು ಆಡಲು

www.chess.com

(ಮುಂದುವರಿಯುವುದು ..... )