Monday, September 20, 2010

ಎತ್ತ ಸಾಗಿದೆ ಸಾಹಿತ್ಯ?

"ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ" ಅನ್ನುವ ಕುಮಾರವ್ಯಾಸನ ನುಡಿ ಈಗ ಮಹಾಭಾರತಕ್ಕೂ ಅನ್ವಯವಾಗುತ್ತಿದೆ.

"ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ" ಅನ್ನುವುದು ತನ್ನನ್ನೇ ಕವಿಶ್ರೇಷ್ಟನೆಂದು ಕರೆದುಕೊಂಡ ಕುಮಾರವ್ಯಾಸನ ಭಾಷೆ ಹಾದಿ ತಪ್ಪಿತೇ?"ಬಣಗು ಕವಿಗಳ ಲೆಕ್ಕಿಪನೆ?" ಅನ್ನುವಾಗ ಕುಮಾರವ್ಯಾಸ ಕೂಡ ತನ್ನ ಸಮಕಾಲೀನ ಕವಿಗಳ ಕೃತಿಗಳ ಗುಣಮಟ್ಟದ ಬಗ್ಗೆ ಎಂತಹ ಭಾವನೆ ಹೊಂದಿದ್ದ ಎನ್ನುವುದು ಸ್ಪಷ್ಟ.

ನವ್ಯ ಚಿಂತನೆಯ ಹೆಸರಲ್ಲಿ ಬಂಡಾಯದ ಬ್ಯಾನರಿನಡಿಯಲ್ಲಿ ಇಂದು ಬರೆಯುವ ಅಸಂಖ್ಯಾತ ಕನ್ನಡ ಬರಹಗಾರರ ಬೌಧ್ಧಿಕ ದಿವಾಳಿತನ ಕೂಡ ಈ ಕುಮಾರವ್ಯಾಸನನ್ನು ತಟ್ಟಿದಂತೆಯೇ ನಮ್ಮನ್ನೂ ಚಿಂತನೆಗೆ ಈಡು ಮಾಡುತ್ತಿದೆಯಲ್ಲವೇ? ಸನಾತನ ಭಾರತದ ಮಹಾನ್ ಕಾವ್ಯಕೃತಿಗಳನ್ನು ಮೂಲ ಕವಿಯ ಆಶಯ ಗೊತ್ತಿದ್ದೂ ಹೊಸ ಹೊಸ ದೃಷ್ಟಿಕೋನಗಳಿಂದ ಕಂಡು ಬರೆದು ಅದೆಷ್ಟೋ ಅಣಕು ಕಾವ್ಯದ ಸೃಷ್ಟಿ ಮಾಡಿ ಕನ್ನಡದ ಓದುಗರನ್ನು ಗೊಂದಲಕ್ಕೀಡು ಮಾಡಿದ್ದು ಮಾತ್ರ ಈ ಸಾಹಿತಿಗಳ ಕವಿಗಳ ಹೆಗ್ಗಳಿಕೆ. ಸಾವಿರಾರು ಪುಟಗಳ ಲಕ್ಷಾಂತರ ಸಂಸ್ಕೃತ ಶ್ಲೋಕಗಳ "ಮಹಾಭಾರತವನ್ನು " ಓದುವ ತಾಳ್ಮೆ ಸಮಯ ಇಲ್ಲದ ಇಂದಿನ ಕನ್ನಡದ ಓದುಗ ಸುಲಭವಾಗಿ ದೊರೆಯುವ ಚೂರುಪಾರು ಹೆಕ್ಕಿ ಬೇಗ ಓದಿ ಮುಗಿಸಬಹುದಾದ ಕಿರು ಪತ್ರಿಕಾ ಲೇಖನವನ್ನೇ ಅವಲಂಬಿಸಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಇಂದಿನ ಅನೇಕ ಬರಹಗಾರರು ಆಳವಾದ ಅಧ್ಯಯನ ಇಲ್ಲದ ಮೂಲ ಗ್ರಂಥಕ್ಕೆ ಮೂಲ ಕವಿಯ ಪರಿಶ್ರಮಕ್ಕೆ ಮೂಲ ಕವಿಯ ಆದರ್ಶಕ್ಕೆ ಬಿಡಿಗಾಸು ಬೆಲೆ ಕೊಡದೆ ಕೇವಲ ಪ್ರಸಿದ್ಧ್ಧಿಗಾಗಿ "ವೈಚಾರಿಕತೆ" ಅನ್ನುವ ಬಣ್ಣ ಹಚ್ಚಿ ಬರೆದು ಅಪ್ರಬುಧ್ಧ ಓದುಗರ ಅಗ್ಗದ ಚಪ್ಪಾಳೆ ಗಿಟ್ಟಿಸುತ್ತಿರುವುದು ಕನ್ನಡದ "ಬಣಗು ಕವಿಗಳ" ದಂಡು ಬೆಳೆಯುತ್ತಿರುವುದರ ದ್ಯೋತಕ.

ಈ ಕವಿಗಳ ದೃಷ್ಟಿಯಲ್ಲಿ ಕೌರವನೆ ಆದರ್ಶ! ವಿಮರ್ಶೆಯ ಹೆಸರಿನಲ್ಲಿ ವ್ಯಾಸಭಾರತದ ಪಾತ್ರಗಳನ್ನೂ ಸಮಕಾಲೀನ ಮನೋಭಾವಕ್ಕೆ ತಕ್ಕುದಾಗಿ ವೈಭವೀಕರಿಸಿ ಸಮಕಾಲೀನ ಜಗತ್ತಿನ ಹೊಸ ಹೊಸ ಸಾಮಾಜಿಕ ಸಮಸ್ಯೆಗಳೊಂದಿಗೆ ಸಮೀಕರಿಸಿ ಸುಪ್ತ ಭಾವನೆಗಳನ್ನು ಕೆಣಕಿ ಬಂಡಾಯದ ಬಣಗು ತನಕ್ಕೆ ಬೆಂಬಲ ಪಡೆಯುತ್ತಿರುವುದು ಶೋಚನೀಯ.ಇದೇ ಮಹಾಭಾರತದ ಮೂಲದ ಆಶಯಕ್ಕೆ ಪೂರಕವಾದ ಬರಹ ಪ್ರವಚನಗಳು ಸಪ್ಪೆ ಎನ್ನಿಸುವಂತೆ ಬಿಂಬಿಸಿ ಪಾಂಡಿತ್ಯ ಪೂರ್ಣ ಕೃತಿಗಳನ್ನು ಅಲಕ್ಷಿಸುವ ಜಾಣ ಕುರುಡು ಕೂಡ ಅಧುನಿಕ ಮಾಧ್ಯಮಗಳದ್ದು.

ಇತ್ತೀಚಿಗೆ ಬರಹಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶಗಳು

ಒಂದು ತಪ್ಪು ಕಲ್ಪನೆ, ತಪ್ಪು ತಿಳುವಳಿಕೆ ಆಧಾರವಾಗಿಟ್ಟು ಕಥೆ ಬರಹ ಕಾವ್ಯ ಹೆಣೆಯುವುದು

ಏಕಲವ್ಯನ ಗುರುಭಕ್ತಿಯ ಸಂದೇಶವನ್ನು ಮರೆಮಾಚಿ "ಏಕಲವ್ಯನ ಜಾತಿ, ಮೇಲ್ವರ್ಗದವರ ಅನ್ಯಾಯ, ದ್ರೋಣನ ಪಕ್ಷಪಾತಿತನ" ವಸ್ತುವಾಗುತ್ತಿರುವುದು

ವಿದುರ ಒಬ್ಬ ಮಹಾ ಮಂತ್ರಿಯಾಗಿ "ಕುರು ಸಿಂಹಾಸನ" "ಕುರು ಕುಲ" ದ ಒಳಿತಿಗಾಗಿ ತೆರೆಮರೆಯಲ್ಲಿ ಶ್ರಮಿಸಿದ ರಾಜ ನೀತಿಜ್ನನಾಗಿ ಕಾಲನಂಶಾವತಾರಿಯಾಗಿ ಮಹಾನ್ ಭಗವಧ್ಭಕ್ತನಾಗಿ ಕಾಣದೆ ದಾಸೀ ಪುತ್ರನೂ, ದಲಿತನೂ ಶೋಶಿತನೂ, ಕುರುವಂಶದ ಹಿರಿಯರ ರಾಜಕೀಯದಾಟದ "ಬಲಿ" ಯಾಗಿ ಚಿತ್ರಿತನಾಗುವುದು.

ಕೃಷ್ಣ ಮಹಾವಿಷ್ಣುವಿನ ಒಂದು ಪರಿಪೂರ್ಣ ಅವತಾರವಾಗಿ "ಭಕ್ತಾಧೀನ"ನೂ "ದೀನ ಬಂಧುವೂ" "ಶಿಷ್ಟ ರಕ್ಷಕನೂ" ಕರುಣಾ ಸಾಗರನೂ" "ಧರ್ಮದ ಮಿತಿಯನ್ನು" ಮೀರದೆ ಇಡೀ ಗೋಕುಲವನ್ನು ತನ್ನ ಅಪೌರುಷೇಯವಾದ ಲೀಲಾ ನಾಟಕದ ರಂಗವಾಗಿಸಿ ನಲಿದ ಜಗನ್ನಿಯಾಮಕನಾಗಿ ಅಖಿಲಾಂಡ ಕೋಟಿ ಬ್ರಹ್ಮಾಂಡ ವನ್ನು ತನ್ನಲ್ಲಿ ಧರಿಸಿದ ವಿಮಲ ಮೂರ್ತಿಯ ವಿಶ್ವ ರೂಪವಾಗಿ ವಿಶ್ವದ ಮೂಲ ಪುರುಷನಾಗಿ ಕಾಣದೆ "ಹೆಂಗಳೆಯರ ಪ್ರಿಯ ಸಖ" "ಅತಿ ಆದರ್ಶದ ಕಟುತ್ವವನ್ನು ಪ್ರತಿಪಾದಿಸದೆ" "ಸಾಮಾನ್ಯ ಮರ್ತ್ಯ ಕನ್ಯೆಯರ ಲೌಕಿಕ ಭಾವನೆಗಳಿಗೆ ಸ್ಪಂದಿಸುವ ಏಕೈಕ ಗಂಡು ಪ್ರತಿನಿಧಿ" " ರಾಜಕೀಯದ ತಂತ್ರಗಾರಿಕೆಯ ಶ್ರೇಷ್ಟ ಗುರುವಾಗಿ" "ಪತಿತರಿಗೆ ಮನೋಚಿಕಿತ್ಸೆ ನೀಡಿ ಸ್ಫೂರ್ತಿ ತುಂಬುವ ನಿರ್ವಾಹಕ" "ಕುರುಬ ಗೊಲ್ಲ ಜಾತಿಯ ಆತ್ಮಾಭಿಮಾನ ಮೆರೆದು ಕಿಂಡಿಯಲ್ಲಿ ಕನಕನಿಗೆ ದರ್ಶನವಿತ್ತು ಮೆಲ್ವರ್ಗಕ್ಕೆ ಪಾಠ ಕಲಿಸಿದ ಮಹಾಮಹಿಮ" ಇತ್ಯಾದಿಯಾಗಿ ಕಾಣುವುದು

ರಾಮ ಒಬ್ಬ ಸ್ತ್ರೀ ವಿರೋಧಿಯಾದರೆ ಧರ್ಮರಾಯ ನಿರ್ವೀರ್ಯ. ಕರ್ಣ ಜನ್ಮಾಂತರದ ಕರ್ಮ ಕಳೆಯಲು ನರ-ನಾರಾಯಣರ ಆಗ್ರಹಕ್ಕೆ ತುತ್ತಾದ ಕವಚಿಯಾಗೋ, ಮರದ ಮರೆಯಲ್ಲಿ ನಿಂತು ವಾಲಿಯನ್ನು ದಂಡಿಸಿದ ರಾಮ ದೋಷ ನಿವೃತ್ತಿಗಾಗಿ ಮುಂದಿನ ಅವತಾರದಲ್ಲಿ ಸೂರ್ಯ ಪುತ್ರನಾದ ಸುಗ್ರೀವನ ಅಪರಾವತಾರ ಕರ್ಣನನ್ನ ಇಂದ್ರ ತನಯ ಅರ್ಜುನನಿಂದ [ವಾಲಿಯ ಮರುಜನ್ಮ ?]ಕೊಲ್ಲಿಸಿದ್ದು ತಿಳಿದೇ ಇರುವುದಿಲ್ಲ. ಕರ್ಣ ಅಭಿಮನ್ಯುವಿನ ಕೈ ಕತ್ತರಿಸಿದ್ದು ಮರೆತು ದ್ರೌಪದಿಯ ನಗ್ನ ಸೌಂದರ್ಯ ಕಾಣಲು ತವಕಿಸಿದ್ದು ಕೂಡ ಮರೆತು ಅವನನ್ನು ಸಹಾನುಭೂತಿಯ ದೃಷ್ಟಿಯಲ್ಲಿ ಕಂಡು ವಿದುರ,ಅರ್ಜುನನಂತಹ, ಧರ್ಮರಾಜನಂತಹ, ಅಷ್ಟೇ ಏಕೆ ಮಹಾ ಭಕ್ತ ಭೀಷ್ಮನಂತಹ ಮೇರು ಪಾತ್ರಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹೊಸ ಪೀಳಿಗೆಯೇ ಸೃಷ್ಟಿಯಾಗಿದೆ.

ಇನ್ನು "ಸೀತೆ ಮತ್ತು ಪಾಂಚಾಲಿ"ಯಾ ಕಥೆ ಸ್ತ್ರೀ ಪರ ವಿರೋಧಿಗಳಿಗೆ ಮುಖ್ಯ ವಸ್ತು. ಒಮ್ಮೊಮ್ಮೆ ಅಬಲೆಯಾಗಿ ಮತ್ತೊಮ್ಮೆ ಶಕ್ತಿ ಸ್ವರೂಪಿಣಿಯಾಗಿ ಮಗದೊಮ್ಮೆ ಪಂಚ ಪಾಂಡವರ ಅತ್ಯಾಚಾರಕ್ಕೋ ಒಳಗಾದ ದ್ರೌಪದಿಯಲ್ಲಿ , ಶ್ರೀರಾಮನ ಸಂಶಯಕ್ಕೋ ಪಾತ್ರವಾದ ಸೀತೆಯಲ್ಲಿ ತಮ್ಮ ಪ್ರತಿಬಿಂಬ ಕಂಡು ಭಾವುಕರಾಗುವ ಗುಂಪು ಇನ್ನೊಂದೆಡೆ.

ಹೌದು. ನನ್ನ ಭಾವನೆಯಲ್ಲಿ ಸಮಾಜಕ್ಕೆ ಶಕ್ತಿಯುತ ಸಂದೇಶ ರವಾನಿಸುವಲ್ಲಿ ಮುಂದಿನ ಪೀಳಿಗೆಗೆ ಸತ್ವಯುತ ಚಾರಿತ್ರ್ಯದ ಮಹತ್ವ ಸಾರುವಲ್ಲಿ ಸಾಹಿತಿಗಳು ವಿಫಲರಾಗಿ ಕೇವಲ ಮನೋರಂಜನೆಯ ಸರಕನ್ನು ಒದಗಿಸುತ್ತ

ಗೊಂದಲ ಹುಟ್ಟು ಹಾಕುತ್ತ ಕ್ಷಣಿಕ ಸುಖದ ಕಲ್ಪನಾ ಲೋಕಸೃಷ್ಟಿಸಿ ಮಾನಸಿಕ ವ್ಯಭಿಚಾರವನ್ನು ಪೋಷಿಸುತ್ತ ನಡೆದಿರುವುದು ಸ್ಪಷ್ಟ. ಇಂತಹ ಬರಹಗಳು ಸಂಸಾರಗಳನ್ನು ಒಂದುಗೂಡಿಸುವ ಬದಲು ಒಡೆಯುತ್ತವೆ. ಪ್ರೀತಿಸಿ ಮದುವೆಯಾದ ಗಂಡನು ಶ್ರೀರಾಮಚಂದ್ರನಿದ್ದರೂ ಗೋಪಿಕೆಯರ ಮನಗೆದ್ದ ಕೃಷ್ಣನ ಹುಡುಕಾಟದ ಭ್ರಮೆಯಲ್ಲಿ ಮಾನಸಿಕವಾಗಿಯಾದರೂ ತೊಳಲಾದುವಂತೆ, ಕಲ್ಪನೆಯ ಲೋಕದಲ್ಲಿ ವಿಹರಿಸುತ್ತಾ ನಿಜಜೀವನದಲ್ಲಿ ಅತೃಪ್ತಿಯನ್ನು ಹೊಂದುವಂತೆ ಮಾಡದಿರುತ್ತದೆಯೇ? ಹೊಸ ಹೊಸ ವಾದ ವಿವಾದಗಳ ಸರಕು ಸೃಷ್ಟಿ ಮಾತ್ರ ಮಾಡುವ ಇಂದಿನ ಬರಹಗಾರರ ಚಾರಿತ್ರ್ಯವೇನು? ಬಧ್ಧತೆಯೇನು? ಜನರೇಕೆ ಪ್ರಶ್ನಿಸುವುದಿಲ್ಲ? ಕೆಟ್ಟದ್ದನ್ನು ಕೆಟ್ಟ ಅಭಿವ್ಯಕ್ತಿಯನ್ನು ಹೊಗಳುತ್ತಾ "ನನಗೂ ಹಾಗೆಯೇ ಅನ್ನಿಸುತ್ತದೆ" ಎಂದು ಬೆನ್ನು ತಟ್ಟುವ ಭಾವುಕ ಓದುಗರ ಚಿತ್ತ ಚಾಪಲ್ಯದ ಗೊಬ್ಬರವನ್ನೇ ಹೀರಿ ಬದುಕುವ ಈ ಸಾಹಿತಿಗಳಿಗೆ ನಮ್ಮ ಸನಾತನ ಧಾರ್ಮಿಕ ಗ್ರಂಥಗಳೇ ಏಕೆ ಬೇಕು?
ಸಮಾಜಕ್ಕೆ ಒಳಿತನ್ನು ಮಾಡುವ ಸಾಹಿತ್ಯ ಸೃಷ್ಟಿ ಕಷ್ಟಕರವೇ? ಈ ಸಾಹಿತಿಗಳು ಸಮಕಾಲೀನ ಸಮಾಜದ ಸಮಸ್ಯೆಗಳನ್ನು ಕಿಂಚಿತ್ತಾದರೂ ಪರಿಹರಿಸುವ ಸಾಹಿತ್ಯವೇಕೆ ಸೃಷ್ಟಿಸುತ್ತಿಲ್ಲ? ಎಲ್ಲ ವಿಷಯಕ್ಕೂ ಬಂಡಾಯ ಅಗತ್ಯವೇ? ಎಂತಹ ಸಮಾಜ ನಿರ್ಮಾಣ ಇವರ ಗುರಿ? ತತ್ವ ರಹಿತವಾದ ಚಿಂತನೆ ಬಹುಕಾಲ ಉಳಿದೀತೇ? ಭಾರತ-ರಾಮಾಯಣ-ಮನುಧರ್ಮ ಶಾಸ್ತ್ರ, ಶ್ರುತಿ, ಸ್ಮೃತಿ ಪುರಾಣ ಗಳ ಆಧಾರವನ್ನು ಬಿಟ್ಟು ವಿಜ್ಞಾನ ಕೃಷಿ ಸಂಸ್ಕೃತಿ ಕಲೆ ಇತ್ಯಾದಿ ವಿಷಯಗಳ ಮೇಲೆ ಸಂಶೋಧನಾತ್ಮಕ ರಚನಾತ್ಮಕ ಸ್ಪರ್ಧಾತ್ಮಕ ಸಾಹಿತ್ಯಕ್ಕೇಕೆ ಬೆಂಬಲ ಕಡಿಮೆ?

ಯೋಚಿಸಿದಷ್ಟು ಉತ್ತರ ಮರೀಚಿಕೆಯಾಗುವ ವಿಷಯವಿದು. ಧಮನಿ ಧಮನಿಯಲ್ಲಿಯು ಋಣಾತ್ಮಕತೆ ತುಂಬಿದ್ದು ಬಿಳಿ ಬಣ್ಣವನ್ನು ತಿಳಿಯಲು ಮೊದಲು ಕಪ್ಪು ಬಣ್ಣವನ್ನು ಕಾಣುವ ಕಲ್ಪಿಸುವ ಮನೋವ್ಯಾಧಿಯೇ ಇದು?

ಒಟ್ಟಿನಲ್ಲಿ ಕನ್ನಡ ತನ್ನ ಆಕರ್ಷಣೆ ಕಳೆದುಕೊಂಡರೆ ಅದು ಇಂದಿನ ಜನರಿಂದಲೇ. ಅವರ ಪ್ರಭುದ್ಧತೆಯ ಕೊರತೆಯಿಂದಲೇ ಅನ್ನುವುದು ಒಪ್ಪಲು ಕಷ್ಟವಾದರೂ ಸತ್ಯ.

9 comments:

ಗೌತಮ್ ಹೆಗಡೆ said...

ಲೇಖನದಲ್ಲಿನ ವಿಚಾರಗಳು ಒಳ್ಳೆಯದಿದೆ ಸರ್ :)

V.R.BHAT said...

ಲೇಖನ ಮಾರ್ಮಿಕವಾಗಿದೆ, ಚಿಂತನೆಗೆ ಹಚ್ಚುತ್ತದೆ, ನಿಮಗೂ ಕೂಡ ದೀಪಾವಳಿಯ ಶುಭಾಶಯಗಳು

V.R.BHAT said...

ಲೇಖನ ಮಾರ್ಮಿಕವಾಗಿದೆ, ಚಿಂತನೆಗೆ ಹಚ್ಚುತ್ತದೆ, ನಿಮಗೂ ಕೂಡ ದೀಪಾವಳಿಯ ಶುಭಾಶಯಗಳು

ಶಿವರಾಮ ಭಟ್ said...

ಶ್ರೀಯುತ ವಿ ಆರ್ ಭಟ್ ಮತ್ತು ಗೌತಮ್,
ನನ್ನ ಬ್ಲಾಗಿಗೆ ತಮಗೆ ಸ್ವಾಗತ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಶಿವರಾಂ

ಮಹೇಶ said...

ಪ್ರತಿಯೊಂದು ಪಾತ್ರವೂ ತನ್ನನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತದೆಯಲ್ಲವೇ. ಸಾಹಿತ್ಯವೂ ಅದೇ ರೀತಿ ಭಿನ್ನ ಭಿನ್ನ ದೃಷ್ಟಿಕೋನಗಳಲ್ಲಿ ವಿಮರ್ಶಿಸಲು ಪ್ರಯತ್ನಿಸುತ್ತದೆ. ನಮ್ಮ ಯಕ್ಷಗಾನಗಳಲ್ಲಿ ಖಳನಾಯಕನೇ ಪ್ರಮುಖ ಪಾತ್ರಧಾರಿಯಲ್ಲವೇ

ಶಿವರಾಮ ಭಟ್ said...

ಮಹೇಶ್,
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಅಭಿಪ್ರಾಯ ಸತ್ಯ. ಯಕ್ಷಗಾನದಲ್ಲಿ ಪಾತ್ರ ಪೋಷಣೆ, ಮನೋರಂಜನೆ ಮುಖ್ಯ.
ವಿಮರ್ಶಾ ಸಾಹಿತ್ಯದಲ್ಲಿಯೂ ಕೂಡ ಖಳನಾಯಕರ ಸಮರ್ಥನೆ ನಡೆದಿದೆ. ಸಾಹಿತ್ಯ ಪ್ರಕಾರಗಳೂ ಅನೇಕ:-)
ಶಿವರಾಂ

V.R.BHAT said...

’ವೇದಸುಧೆ’ಗೆ ತಮ್ಮನ್ನು ಆಹ್ವಾನಿಸುತ್ತಿದ್ದೇನೆ, ನಿಮ್ಮಂತಹ ಹಲವು ಕೈಗಳು ’ವೇದಸುಧೆ’ ಯ ಉದ್ದೇಶವನ್ನು ಕಾರ್ಯಗತಗೊಳಿಸುತ್ತವೆ ಎಂಬ ಅನಿಸಿಕೆ ಕೂಡ ನಮ್ಮೆಲ್ಲರದು.

ಶಿವರಾಮ ಭಟ್ said...

ಶ್ರೀಯುತರೆ,
ನಿಮ್ಮ ಆಹ್ವಾನಕ್ಕೆ ಧನ್ಯವಾದಗಳು. ವೇದಸುಧೆಯಲ್ಲಿ ಪ್ರಕಟವಾಗುವ ಉತ್ತಮ ಲೇಖನಗಳನ್ನು ಓದುತ್ತಿರುತ್ತೇನೆ.
ಶಿವರಾಮ ಭಟ್

V.R.BHAT said...

ಶಿವರಾಮ ಭಟ್ಟರೇ ತಮಗೂ ಹೊಸ ಕ್ಯಾಲೆಂಡರ್ ವರ್ಷದ ಹಾರ್ದಿಕ ಶುಭಾಶಯಗಳು, ಒಂದು ಮಾತು - ನಿಮ್ಮ ಬ್ಲಾಗನ್ನು ನೇರವಾಗಿ ಸಂಪರ್ಕಿಸಲು ಅನುಕೂಲವಾಗುವಂತೇ ಫಾಲೋ ಲಿಂಕ್ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಅದೌ ಪ್ರದರ್ಷನಕ್ಕಲ್ಲ, ಅನುಕೂಲಕ್ಕಷ್ಟೇ, ನಾನು ಬಜ್ ಗೆ ಕೂಡ ಬರುತ್ತಿಲ್ಲವಾಗಿ ನಿಮ್ಮ ಸಂಪರ್ಕಕ್ಕೆ ಸಾಧ್ಯವಾಗುತ್ತಿಲ್ಲ. ನಿಮ್ಮ ಮೇಲ್ ಐಡಿ ಇದ್ದರೆ ಅದರ ಮೂಲಕ ಸಂಪರ್ಕಿಸಬಹುದಿತ್ತು-ಅದೂ ಸಿಗಲಿಲ್ಲ. ಇಡೆ ಜನವರಿ ೩೦ ರಂದು ಹಾಸನದಲ್ಲಿ ದಿನಪೂರ್ತಿ ’ವೇದಸುಧೆ’ಯ ಪ್ರಥಮ ವಾರ್ಷಿಕೋತ್ಸವ ನಡೆಯುತ್ತದೆ. ಕಾವ್ಯ-ಸಾಹಿತ್ಯ ಗೊಷ್ಠಿ, ವೇದಗೋಷ್ಠಿ, ಗಾಯನ, ನೃತ್ಯ, ಪುಸ್ತಕ ಬಿಡುಗಡೆಯೇ ಮೊದಲಾದ ಹಲವು ಕಾರ್ಯಕ್ರಮಗಳನ್ನು ಮಿತ್ರರೆಲ್ಲಾ ಸೇರಿ ಆಯೋಜಿಸಿದ್ದಾರೆ. ನಿಮಗೆ ಅನುಕೂಲವಿದ್ದರೆ ಭಾಗವಹಿಸಬೇಕಾಗಿ ವಿಜ್ಞಾಪನೆ. ಇದೊಂದು ಸಜ್ಜನರ ಕೂಟ, ಮನರಂಜನೆಯ ಜೊತೆಜೊತೆಗೆ ಜ್ಞಾನಾರ್ಜನೆ ಇಲ್ಲಿನ ಪ್ರಮುಖ ಅಂಶ!