Friday, August 13, 2010

"ಕುಂಡೆಲೀ ನಾಮ! ನಗರೀ"!

"ಕುಂಡೆಲೀ ನಾಮ! ನಗರೀ"!ಸಂಸ್ಕೃತ ಪಾಠ ಮಾಡುತ್ತಿದ್ದ ಮಾಸ್ತರರು ಮಕ್ಕಳಿಗೆ ಹೀಗೆ ಭಾಷಾಂತರ ಮಾಡಿದ್ದರು. ಕುಂಡೆಯ ಮೇಲೆ ನಾಮ ಇದ್ದರೆ ನಕ್ಕುಬಿಡಿ!!

ಎರಡು ಪ್ರಕಾಂಡ ಸಂಸ್ಕೃತ ಪಂಡಿತರು ಪರ ಊರಿಗೆ ಪ್ರಯಾಣ ಮಾಡುತ್ತಿದ್ದರು. ಮಾರ್ಗ ಮಧ್ಯೆ ಗೊಂಡಾರಣ್ಯ ಎದುರಾಯ್ತು. ಅಷ್ಟೇ ಅಲ್ಲ ಪ್ರಾಯಾನದಿಂದ ಬಳದಿದ್ದ ಇಬ್ಬರಿಗೂ ನಿಸರ್ಗ ಕರೆಯ ಒತ್ತಡ ಕೂಡ ಹೆಚ್ಚಾಗಿತ್ತು. ಬಹಿರ್ದೆಷೆಯ ಬಲವಾದ ಒತ್ತಡಕ್ಕೆ ಓಗೊಟ್ಟು
ಕಾರ್ಯಕ್ರಮ ಮುಗಿಸಿದ ಪಂಡಿತರು ಸಮೀಪವೆಲ್ಲೂ  ನೀರನ್ನು ಕಾಣದೆ ಪರದಾಡಿದರು. ಆಯಕಟ್ಟಿನ ಪ್ರದೇಶ ಗುದಪ್ರಕ್ಷಾಲನ ಮಾಡದೆ ಪ್ರಯಾಣ ಮುಂದುವರೆಸುವಂತಿಲ್ಲ. ಅದರಲ್ಲೊಬ್ಬ ಪಂಡಿತ ಪಕ್ಕದಲ್ಲಿದ್ದ ಮರವೇರಿ ದೂರಕ್ಕೆ ದೃಷ್ಟಿ ಹಾಯಿಸಿದ. ಸುಮಾರು ಯೋಜನ ದೂರದಲ್ಲಿ ಚಿಕ್ಕ ಸರೋವರ ಕಾಣಿಸಿತು. ನೀರಿನ್ನು ಕಂಡ ಸಂತೋಷದಲ್ಲಿ ಪಂಡಿತ ವರೆನ್ಯರ ಬಾಯಿಯಿಂದ ಮಂತ್ರದ ಉದ್ಗಾರ ಹೊರಟಿತು  "  ಜಲಂ ಕಂಡಂ ಗುದಂ ಶುಧ್ಧಂ "  ಹಿರಿಯರ ಮಂತ್ರೋಚ್ಚಾರದ ಮರ್ಮವರಿತ ಕಿರಿಯ ಪಂಡಿತರು ಮರದ ಮೇಲಿದ್ದ ಹಿರಿಯ ಪಂಡಿತರನ್ನ ಕೆಳಗಿನಿಂದ ಮೇಲೆ ನೋಡಿ "ಅದಂ ಕಂಡಂ ಇದಂ ಶುಧ್ಧಂ"  ಅನ್ನುವ ಮಹಾಮಂತ್ರ ಉಚ್ಛಾರ ಮಾಡಿ ಪರಮ ಶುಧ್ಧಿಯನ್ನ ಪಡೆದು ಪ್ರಯಾಣವನ್ನು ಮುಂದುವರೆಸಿದರು.

ನಮ್ಮ ಜೀವನದಲ್ಲಿ ನಿತ್ಯ ನೂತನ ಹಾಸ್ಯ ಪ್ರಸಂಗಗಳು ಸಿಗುತ್ತಲೇ ಇರುತ್ತದೆ. ಮನೆಯ ಟೇಬಲ್ ಮೇಲೆ ಮುದ್ದಾದ ಗಂಡು ಮಗುವಿನ ಗೊಂಬೆ ನೋಡಿ ಮಗಳು ನನ್ನ ಕೇಳಿದ್ದಳು
"ನೀನು ತಂದೆಯ?"
ಅದಕ್ಕೆ ತಕ್ಷಣ ನಾನು ಅಲ್ಲ ನಾನು ಅದರ "ತಂದೇನೂ ಅಲ್ಲ ತಾಯಿನು ಅಲ್ಲ" ಅದು ಗೊಂಬೆ ಅಂದಾಗ ಮನೆ ತುಂಬೆಲ್ಲ ನಗು ಮೊಳಗುತ್ತಿತ್ತು.

ಮೊನ್ನೆ ನಾನು ದಿನಸಿ ಅಂಗಡಿಗೆ ಹೋಗಿದ್ದೆ. ಕ್ಯಾಶ್ ಕೌಂಟರ್ ಟೇಬಲ್ ಮೇಲೆ ಯಾರೋ ಒಂದು ಕ್ಯಾರಿ ಬ್ಯಾಗ್ ನಲ್ಲಿ ಮೊಟ್ಟೆ ಇಟ್ಟಿದ್ದರು. ಹಣ ಪಾವತಿ ಮಾಡಲು ನಿಂತಿದ್ದ ನನ್ನನ್ನು ಅಂಗಡಿಯವ "ಸಾರ್ ಮೊಟ್ಟೆ ನಿಮ್ಮದಾ?" ಎಂದು ಕೇಳಿದ...ಬೇಕೆಂತಲೇ ನಾನು ಕೀಟಲೆ ಮಾಡಲು " ಅಲ್ಲಪ್ಪ! ಅದು ಕೋಳಿದು...!" ಎಂದೆ. ಸುತ್ತಲು ಇದ್ದ ಜನ ಎಲ್ಲ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದರು. ದೂರದಲ್ಲಿ ನಿಂತಿದ್ದ "ಮೊಟ್ಟೆ ಇಟ್ಟಿದ್ದ" ಹುಡುಗಿ ಟೊಮೇಟೊ ತರ ಮುಖ ಕೆಂಪಗೆ ಮಾಡಿಕೊಂಡಿದ್ದಳು!

ನಮ್ಮ ಸಂಬಂಧಿಕರಾದ ರಾಮಸ್ವಾಮಿ ಯವರು ಸಾಗರದ ಕಡೆ ಹವ್ಯಕರು. ಯೆಲ್ಲಾಪುರದ ಹಳ್ಳಿಯೊಂದು ಅವರ ಮಾವನಮನೆ.

ಅಲ್ಪ ಸ್ವಲ್ಪ ಹವ್ಯಕ ಮಾತಾಡುತ್ತಿದ್ದರು. ಸಂಬoಧ ಸೂಚಕ ಶಬ್ಧಗಳು ಅವರಿಗೆ ಅಷ್ಟು ಸರಿಯಾಗಿ ಗೊತ್ತಿರಲಿಲ್ಲ. ಹೆಣ್ಣು ಕೊಟ್ಟ ಮಾವನಿಗೆ "ಮಾವನೋರು" ಅತ್ತೆಗೆ "ಅತ್ತೇರು", ಹೆಂಡತಿಯ ಮಾವನಿಗೆ "ಅಪ್ಪಚ್ಚೇರು" ಅತ್ತೆಗೆ "ಕಿರ್ಬೇರು"

ಹೀಗೆ ಹಳೆಗನ್ನಡದ ಶಬ್ದಗಳು ಸತ್ತು ದಶಕಗಳೇ ಕಳೆದಿದ್ದರೂ ತಾಯಿಗೆ "ಅಬ್ಬೆ" ದೊಡ್ಡಪ್ಪನಿಗೆ "ಹಿರ್ಪ""ಬಪ್ಪ" ದೊಡ್ಡಮ್ಮನಿಗೆ "ಹಿರ್ಬೆ" "ದೊಡ್ದಾಯಿ" ಚಿಕ್ಕಪ್ಪನಿಗೆ "ಅಪ್ಪಚ್ಚಿ" ಚಿಕ್ಕಮ್ಮನಿಗೆ "ಚಿಕ್ಕಿ" "ಕವ್ವ" ಇತ್ಯಾದಿಗಳು ಇನ್ನು ಬಳಕೆಯಲ್ಲಿದೆ. ಇಲ್ಲಿ ಶಬ್ದಗಳು ಮಾತ್ರ ನಶಿಸಿಲ್ಲ. ಸಂಬಂಧಗಳು ಕೂಡ ಕ್ರಮೇಣ ನಿಧಾನವಾಗಿ ಮಾಯವಾಗುತ್ತಿವೆ. ಅಕ್ಕ, ಅಣ್ಣ, ತಮ್ಮ, ತಂಗಿ, ಭಾವ, ಅತ್ತಿಗೆ ಇತ್ಯಾದಿಗಳು ಏಕಮಾತ್ರ ಸುಪುತ್ರನೋ ಸುಪುತ್ರಿಯೋ ಆಗಿ ನ್ಯಾನೋ ಕುಟುಂಬದಲ್ಲಿ ಹುತ್ತಿರುವವರಿಗೆ ಹೇಗೆ ಗೊತ್ತಾಗಬೇಕು? ವಿದೇಶಗಳಲ್ಲಿಯಂತೆ ಸಂಬಂಧದ ಸಮೀಕರಣ ಸಂಕೀರ್ಣವಾಗಿ ತನಗೆ ತಾನೇ ಅಪ್ಪನೂ ತನಗೆ ತಾನೇ ಮಾವನೂ ಅಜ್ಜನೂ ಹೆಂಡತಿಯೇ ತಾಯಿಯು, ಮಗಳೇ ಅತ್ತೆಯು ಆಗುವ ಕಾಲ ಬಂದಿಲ್ಲವಲ್ಲ! ಸಮಾಧಾನ ಪಡಿ... ಕೊನೆಗೆ "ತಾಯಿ - ಮಗು" "ಗಂಡ-ಹೆಂಡತಿ" ಅನ್ನುವ ಸಂಬಂಧ ಮಾತ್ರ ಉಳಿಯಬಹುದು!... ಶಬ್ದ ಕೋಶವು ಸರಳವಾಗಿ ಮಲೆಯಾಲಿಗಳಂತೆ ತಾಯಿಯ ಹೆಸರನ್ನು ಮಗುವಿನ ಹೆಸರಿನೊಂದಿಗೆ ಸೇರಿಸುವ ಪರಿಪಾಠ ಶುರುವಾದರೆ ಒಳ್ಳೆಯದು. ಮಲೆಯಾಳಿಗಳ ದೂರದರ್ಶಿತ್ವ ಮೆಚ್ಚತಕ್ಕದ್ದಲ್ಲವೇ?

ಹೀಗೆ ಒಂದುದಿನ ಮಾತನಾಡುತ್ತ ಕುಳಿತಿದ್ದಾಗ ರಾಮಸ್ವಾಮಿಯವರ ಮಾವ ಅತ್ತೆ ಒಳಗಿನಿಂದ ಬಂದಿದ್ದರು. ನನ್ನ ಮಾವನಿಗೆ ಅವರು "ಹಿರ್ಪ"ನ ದಂಪತಿ! ರಾಮಸ್ವಾಮಿಯವರು ಮಾತನಾಡುತ್ತ "ಹಿರ್ಪ - ಹಿಪ್ಪಿ" ಇಬ್ರು ನಿನ್ನೆ ಬಂದರು!" ಅಂದಾಗ ಅತ್ತ ನಗಲು ಆಗದೆ ಇಟ್ಟ ನುಂಗಿ ಕೊಳ್ಳಲು ಆಗದೆ ಕಷ್ಟಪಟ್ಟಿದ್ದು ಮರೆಯಲು ಸಾಧ್ಯವೇ ಇಲ್ಲ,
ನನ್ನ ಒಂದು ಕಾಲು ವರ್ಷದ ಮಗಳು "ಅನ್ವಿತಾ" ಹೆಸರಿಗೆ ತಕ್ಕ ಹಾಗೆ ಬುಧ್ಧಿವಂತೆ. ಅವಳದ್ದು ಈಗ ಮಾತು ಕಲಿಯುವ ಭರಾಟೆ... ಅವಳ ಮುದ್ದು ಭಾಷೆಯಲ್ಲಿ ಬಲೂನಿಗೆ "ಬಂನೋ....." ನೀರಿಗೆ "ನಿನ್ನಿ"

ದಿನಾಲೂ ನನ್ನ ಶ್ರೀಮತಿಯ ಮಾರ್ಗದರ್ಶನದಲ್ಲಿ ಅವಳ ಬಾಲ ಶಬ್ಧ ಭಂಡಾರಕ್ಕೆ ಹೊಸ ಸೇರ್ಪಡೆ ನಡೆಯುತ್ತಲೇ ಇದೆ. ನಿನ್ನೆ ನಮ್ಮ ಮನೆಗೆ ಅವಳ "ದೊಡ್ಡಪ್ಪ" ದೊಡ್ದಾಯಿ" ಬಂದಿದ್ದರು. ಶುರು ಆಯಿತು "ಅನ್ವಿತಾಳಿಗೆ" ಈ ಹೊಸ ಶಬ್ದ ಕಲಿಸುವ ಪ್ರಯತ್ನ. ಏಳುತ್ತಾ ಬೀಳುತ್ತಾ ಮನೆ ಎಲ್ಲ ಸುತ್ತು ಹೊಡೆಯುತ್ತಿದ್ದ ಅವಳ ಬಾಯಲ್ಲಿ ಈ ಹೊಸ ಶಬ್ದ ಹೊರಡಿಸಲು ೧೦ ಹಲವಾರು ಸಲ ಪ್ರಯತ್ನ ಮುಗಿದು "ಕೊಳಕಿ" ಅನ್ನುವ ಪ್ರೀತಿಯ ಪ್ರಶಸ್ತಿಯನ್ನು ಪ್ರದಾನ ಮಾಡಿ "ಚಹಾ" [ ಹಾಯ್ ಟೀ ] ಗೆ ಸಿಧ್ಧತೆ ಮುಂದುವರದಿತ್ತು. ನಾವು ಚಹಾ ಹೀರುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಅನ್ವಿತ ದೊಡ್ದಾಯಿಯ ಕಡೆ ಕೈ ತೋರಿಸಿ "ದಡ್ಡಿ... ದಡ್ಡಿ..." ಅನ್ನಬೇಕೆ...ದೊಡ್ಡಪ್ಪ ಮುಂದಿನ ಸರದಿ ತನ್ನದು ಎನ್ನುವುದನ್ನು ಮೊದಲೇ ಊಹಿಸಿ ನಕ್ಕಿದ್ದು ಆಯಿತು.
ಮೊನ್ನೆ ಪ್ರಿಯಾಂಕ ಅನ್ನುವ ಶಾಲಾ ಶಿಕ್ಷಕಿಯ ಹತ್ಯೆಯ ಚರ್ಚೆ ನಮ್ಮ ಮನೆಯಲ್ಲಿ ಜೋರಾಗಿಯೇ ನಡೆದಿತ್ತು. "ಗಂಡನೇ ಕೊಂದಿರಬೇಕು. ಒಂದೆರಡು ದಿನದಲ್ಲಿ ಸಿಕ್ಕಿ ಬೀಳುತ್ತಾನೆ" ಎಂದು ನನ್ನ ಗರ್ಲ್ ಫ್ರೆಂಡು ಮತ್ತು ಅವಳ ಅಮ್ಮ ಅಂದರೆ ನನ್ನ ಅತ್ತೆ ತನಿಖಾಧಿಕಾರಿಗಳಂತೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು. "ಕೊಲೆ ಸುದ್ದಿ ಬಂದು ಅರ್ಧ ಗಂಟೆಯೂ ಕಳೆದಿಲ್ಲ ಅದು ಹೇಗೆ ನೀವು ಗಂಡನೇ ಕೊಲೆಗಾರ ಅನ್ನುವ ನಿರ್ಧಾರಕ್ಕೆ ಬಂದಿರಿ?" ಎಂದು ಪಾಟಿ ಸವಾಲು ಕೇಳಿದ್ದಕ್ಕೆ "ಎಲ್ಲ ಗಂಡನ್ದ್ರದ್ದೆ ಕೆಲಸ ಇರ್ತು " ಅನ್ನಬೇಕೆ...
ಅದಕ್ಕೆ ನಾನು "ಅಯ್ಯೋ ಪಾಪ ಗಂಡ ಮುಗ್ಧ ಆಗಿದ್ರು ಆಗಿರಬಹುದು.. ಅದು ಹೆಂಗೆ ಗಂಡಂದ್ರ ಮೇಲೆ ತಪ್ಪು ಹೊರಿಸ್ತೀರಿ?" "ಮಾವ ಬರಲಿ ಹೇಳ್ತೆ" ಅಂದಾಗ ಒಳ್ಳೆ ಮಜವಾಗಿತ್ತು. ಸ್ವಲ್ಪ ಉತ್ತರಕ್ಕೆ ತಡಕಾಡಿ "ಕೊನೆಗೆ ಕುಂಬಳಕಾಯಿ ಕದ್ದ ಕಳ್ಳನ ತರ ನೀನ್ಯಾಕೆ ತಲೆ ಹಾಕ್ತೆ ಕೇಳಬೇಕೆ?" ಸುಮ್ಮನೆ ಕಾಲೆಳೆಯಲು ಹೋಗಿ ತಿರುಗೇಟು ತಿಂದ ನನ್ನ ಸಹಾಯಕ್ಕೆ ಮಗಳೂ ಬರಲಿಲ್ಲ...

3 comments:

ಸೀತಾರಾಮ. ಕೆ. / SITARAM.K said...

ತುಂಬಾ ಚೆನ್ನಾಗಿ ಬರೆದಿದ್ದಿರಾ... ಶಿವರಾಮ ಭಟ್ಟರೇ! ತಮ್ಮ ಹಾಸ್ಯ ಪ್ರಜ್ಞೆ ಮೆಚ್ಚಬೇಕಾದದ್ದೇ. ಅದರಲ್ಲೂ ಮೊಟ್ಟೆ ಕೋಳಿದು ಸುಪರ್!
ಇನ್ನು ಹೆಚ್ಚು ಹೆಚ್ಚು ಬರಲಿ....

ಶಿವರಾಮ ಭಟ್ said...

ಸೀತಾರಾಮ್ ಸರ್,
ವಂದನೆಗಳು.
ಹಾಸ್ಯ ಹಂಚಿದರೆ ಭಗವಂತನೂ ಮೆಚ್ಚಿಯಾನು. ಅಳಲು ನೂರು ಕಾರಣ ಇರುವ ನಮ್ಮ ಜಗತ್ತಿನಲ್ಲಿ!
ಶಿವರಾಂ ಭಟ್

Narayan Bhat said...

ಶಿವಣ್ಣ,
ಅನ್ವಿತ ನನ್ನ ಏನಂತ ಕರೆಯಬಹುದು, ಹೇಳಿ ವಿಚಾರ ಮಾಡ್ತಾ ಇದ್ದೆ.