Wednesday, June 23, 2010

ಅಶೋಚ್ಯಾನನ್ವ ಶೋಚಸ್ತ್ವಂ

ಇಡೀ ಸಮಾಜವೇ ಭ್ರಷ್ಟವಾದರೆ ಯಾರಿಗಾಗಿ ಶುಧ್ಧ ಹಸ್ತರು ಉಳಿದಾರು?
ಮುಂದೊಂದು ದಿನ ಭ್ರಷ್ಟತೆಯೇ ತತ್ವವಾದರೂ ಆಶ್ಚರ್ಯವಿಲ್ಲ.
ನದೀ ತೀರದಲ್ಲಿ ಪರ್ಣ ಕುಟಿಯನ್ನು ಕಟ್ಟಿ ಹೋಮ ಧೂಮದಿಂದ ಆವೃತವಾದ
ಪ್ರಶಾಂತ ಪರಿಸರದಲ್ಲಿ ತಪಸ್ಸು ಮಾಡಿ ಸಾತ್ವಿಕ ಆಹಾರ ಸೇವನೆ ಸಾತ್ವಿಕ ಪ್ರವೃತ್ತಿ ಸಾತ್ವಿಕ ವಿಚಾರ ಮಾಡುವ ಕಾಲ ಹೋಗಿ "ಜಪ ತಪ ಸುಡಲಿನ್ನು ಜೀವವೊಂದುಳಿದರೆ ಸಾಕು" ಅನ್ನುವ ಕಾಲ ಇದು. ಧ್ಯಾನಮಂದಿರಗಳಲ್ಲಿ  ಚಿತ್ರ ಮಂದಿರ ವಾಣಿಜ್ಯ ಮಹಲು ಹಂಸತೂಲಿಕಾ ತಲ್ಪ ಬೇಕು.   
"ಅಶೋಚ್ಯಾನನ್ವ ಶೋಚಸ್ತ್ವಂ" [ ಶೋಕಿಸಲು ಯೋಗ್ಯರಲ್ಲದವರ ಕುರಿತು ಚಿಂತಿಸಿ ಫಲವೇನು?]ಅನ್ನುವ ಗೀತಾಚಾರ್ಯನ ಮಾತನ್ನು ಮನಸ್ಸು ಮೆಲುಕು ಹಾಕುತ್ತಿದೆ. ಮೌಲ್ಯಗಳನ್ನು ಹಾಸ್ಯ ಮಾಡುವಂತಿದೆ ಸಮಕಾಲೀನ ಪ್ರಪಂಚ. ಎಲ್ಲವೂ ನಾಟಕ... ಗೊಂದಲಮಯ...
ಚಳುವಳಿ ಹೋರಾಟಗಳು ಈಗ ಅಪ್ರಸ್ತುತ. ಸತ್ವಹೀನರಾಗಿ ತತ್ವರಹಿತರಾಗಿ ಬದುಕುವವರಿಗೆ ಒಲಿಯುವ ಆ ಲಕ್ಷ್ಮೀದೇವಿಯ ಮುಂದೆ ಶ್ರೀಮನ್ನಾರಾ ಯಣನೆ ತಲೆತಗ್ಗಿಸುವ ಅಂಜಲಿ ಬಧ್ಧನಾಗುವ ಸಮಯ ಸನ್ನಿಹಿತವಾಗಿದೆ. ಒಂಟಿಗಾಲಿನಲ್ಲಿ ಧರ್ಮ ನಿಂತಿದೆ ಕಲಿಪ್ರವೇಶವಾಗಿದೆ ಅನ್ನುವ ಸಂದೇಶ ಆಸ್ತಿಕರಿಗಾದರೆ ಸಮಾಜದ ಕೊಳಕನ್ನು ಗ್ರಹಿಸುತ್ತ ಹೊಸ ಮೋಸದ ಕಲೆಯನ್ನು ಅಂತಸ್ತ ಗೊಳಿಸುತ್ತ ಬಲವಂತನಾಗು ಅನ್ನುವುದು ಇತರರಿಗೆ  ಪಥ್ಯವಾದೀತು. ಒಟ್ಟಾರೆ ಸಮಾಜ ಅದೆಷ್ಟು ನೈಚ್ಯವೃತ್ತಿಯನ್ನ ಹೊಂದುತ್ತಿದೆ ಅನ್ನುವುದಕ್ಕೆ ಇತ್ತೀಚಿನ ವರ್ತಮಾನಗಳೇ ಸಾಕ್ಷಿ. ವಿದ್ಯಾವನ್ತರೆಂಬ ಭಸ್ಮಾಸುರ ಸಂತತಿಯ ಕಪಟತೆಗೆ ಪರಿಧಿಯುoಟೇ ? ಅವಿದ್ಯಾವಂತರ ಅಜ್ನಾನಕ್ಕೆ ಮಿತಿಯುಂಟೇ ? ಹೀಗಿರುವಾಗ ಅಲ್ಲಲ್ಲಿ ಮರೀಚಿಕೆಯಾಗಿರುವ ಪ್ರಾಮಾಣಿಕರ ಅರಣ್ಯ ರೋದನ ಯಾರನ್ನು ತಲುಪಿ ಏನು ಬದಲಾವಣೆ ಸಾಧ್ಯವಾದೀತು? ಉತ್ಕೃಷ್ಟವಾದ ಗೀತೆಯ ಸಂದೇಶದ ಸಂಕ್ಷಿಪ್ತ ಸಂಗ್ರಹ ಓದಿ ಮನಸ್ಸಿನ ಭಾರ ಕೆಳಗಿಳಿಸಿ.

ಗೀತಾಸಾರ
ಆದುದೆಲ್ಲ ಒಳ್ಳೆಯದಕ್ಕೇ ಆಗಿದೆ .
ಆಗುವುದೆಲ್ಲ ಒಳ್ಳೆಯದೇ ಆಗುತ್ತಿದೆ
ಆಗಲಿರುವುದೆಲ್ಲ ಒಳ್ಳೆಯದೇ ಆಗಲಿದೆ.
ರೋಧಿಸಲು ನೀನು ಕಳೆದುಕೊಂಡಿರುವುದಾದರೂ ಏನು?
ಕಳೆದುಕೊಳ್ಳಲು ನೀನು ಏನನ್ನು ತಂದಿರುವಿ?
ನಾಶವಾಗಲು ನೀನು ಮಾಡಿರುವುದಾದರೂ ಏನು?
ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ.
ನೀನೇನು ಅರ್ಪಿಸಿದ್ದರು ಅದನ್ನು ಇಲ್ಲಿಗೆ ಅರ್ಪಿಸಿರುವೆ.
ನಿನ್ನೆ ಯಾರದ್ದೋ ಆಗಿತ್ತು
ಇಂದು ನಿನ್ನದಾಗಿದೆ
ನಾಳೆ ಯಾರದ್ದೋ ಆಗಲಿದೆ.
ಪರಿವರ್ತನೆ ಜಗದ ನಿಯಮ

3 comments:

Narayan Bhat said...

ಚಿಂತನಗೆ ತೊಡಗಿಸುವ ಲೇಖನ...ಚೆನ್ನಾಗಿದೆ.

ಸೀತಾರಾಮ. ಕೆ. / SITARAM.K said...

ಸತ್ಯವಾದ ವಿಚಾರ! ಮತ್ತು ಸೂಕ್ತವಾದ ವಿಚಾರ! ಚೆನ್ನಾಗಿ ಹೇಳಿರುವಿರಿ!

ಶಿವರಾಮ ಭಟ್ said...

ಮಾವ, ಸೀತಾರಾಮ್ ಸರ್,
ತಮಗೆಲ್ಲ ನನ್ನ ಚುಟುಕು ಬರಹವನ್ನೋದಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.
ಚುಕ್ಕಿ-ಚಿತ್ತಾರ,
ಬರಹದಲ್ಲಿನ ಸೂಕ್ಷ್ಮ ತಪ್ಪು ಗಮನಕ್ಕೆ ತಂದು ಎಚ್ಚರಿಸಿದ್ದಕ್ಕೆ
ತುಂಬಾ ಧನ್ಯವಾದ.
ಶಿವರಾಂ