[ಇಲ್ಲಿಯ ಸತ್ಯ ಘಟನೆಗಳಲ್ಲಿ ಬರುವ ಪಾತ್ರಗಳು ಮಾತ್ರ ಕಾಲ್ಪನಿಕ!!]
ಸಿಂಹ ತಿಂಗಳಿನ ಏಕಾದಶಿ ಅಂದ್ರೆ ಯಕ್ಷಗಾನ ಪ್ರಿಯರು ಎದುರುನೋಡುವ ದಿನ
ನಮ್ಮ ಮನೆಯ ಪಕ್ಕದ ದೇವಸ್ಥಾನದಲ್ಲಿ ಇಡೀ ರಾತ್ರಿ ವಾರ್ಷಿಕ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ.
ತಾಲೂಕಿನ ದೂರದೂರದ ಪ್ರಸಿಧ್ಧ ಕಲಾವಿದರೆಲ್ಲ ಉತ್ಸಾಹದಿಂದ ಭಾಗವಹಿಸುವ ಯೆಲ್ಲಾಪುರ ಸೀಮೆಯ ಜಗತ್ಪ್ರಸಿದ್ಧ ಕಾರ್ಯಕ್ರಮವದು. ಯಕ್ಷಗಾನ ಪ್ರಿಯ ಕೊನೆಗೌಡನೊಬ್ಬ ತನ್ನ ವರ್ಷದ ದುಡಿಮೆಯನ್ನು ದೇಣಿಗೆನೀಡಿ [ ಆಗಿನ ಕಾಲದ ೨೫ ರೂಪಾಯಿ ] ಪ್ರಾರಂಭಿಸಿದ ವಾರ್ಷಿಕ ಹರಕೆ ಈಗ ಕುಂಟುತ್ತ ತೆವಳುತ್ತ ಮುಂದುವರೆದಿದೆ. ಆದರೂ ಅದು ಬಹುಪಾಲು ಹಳ್ಳಿಗರಿಗೆ ಬಹು ಮುಖ್ಯ ಮನರಂಜನಾವಕಾಶ ನೀಡುತ್ತಿತ್ತು.
ಹೊಸ ಹೊಸ ಪ್ರಸಂಗಗಳನ್ನು ಪರಿಚಯಿಸುತ್ತಾ ಹೊಸಬರಿಗೆ ಭಾಗವತಿಗೆಗೆ, ಅರ್ಥಗಾರಿಕೆಗೆ ಅವಕಾಶ ನೀಡುವ ವೇದಿಕೆ ಕೂಡ. ಕೆಲವೊಮ್ಮೆ ಮಹಾ ಮಂಗಳಾರತಿ ಮುಗಿದು ನಾಂದಿಪದ್ಯ ಶುರುವಾಗಿ ಪಾತ್ರ ಹಂಚಿಕೆ ಮಾಡುವ ಹೊತ್ತಿಗೆ ನಮಗೆಲ್ಲ ನಿದ್ದೆ ಬಂದು ಬಿಡುತ್ತಿತ್ತು. ಸಂಧಾನ, ಕರ್ಣ ಪರ್ವ, ಭೀಷ್ಮ ಪರ್ವ, ಶಲ್ಯ ಪರ್ವ, ಸ್ಯಮನ್ತಕೊಪಾಖ್ಯಾನ, ಪಂಚವಟಿ- ವಾಲೀವಧೆ ಪ್ರಸಂಗಗಳು ಹೆಚ್ಚು ಬಾರಿ ನಡೆಯುತ್ತಿದ್ದವು.
ಭೋರ್ಗರೆಯುವ ನಿರಂತರ ಮಳೆ, ಕಿಚಿ ಪಿಚಿ ಕೆಸರು ಹಸಿರು ಹಾವಸೆಯಿಂದ ಜಾರುವ ದಾರಿಯಲ್ಲಿ ಏಳುತ್ತಾ ಬೀಳುತ್ತ ದೇವಸ್ಥಾನ ತಲುಪುವುದು ಸಾಹಸವೇ ಆಗಿತ್ತು.
ಚೌತಿ ದಿನ ನಮ್ಮ ಊರಿನ ಪಂಗಡದ ಕೇರಿಯಲ್ಲಿ ವಿಶೇಷ ತಾಳಮದ್ದಲೆ. ಅಲ್ಲಿಯ ವಿಶೇಷತೆ ಎಂದರೆ ನಮ್ಮ ಧರ್ಮು ನಾಯ್ಕ, ಧರ್ಮಪ್ಪ, ಮಾದೇವ ನಾಯ್ಕ, ರಾಮ ನಾಯ್ಕ, ದುರ್ಗಿ ಶಂಕರ ಇತ್ಯಾದಿ ಮಹಾ ಮಹಾ ಕಲಾವಿದರ ವಾಗ್ವೈಭವ!! ನಾನು ರಜೆಯಲ್ಲಿ ಮನೆಗೆ ಹೋದಾಗ ಪ್ರೀತಿಯಿಂದ "ಸಣ್ಣ ಭಟ್ರು ಯಾವಾಗ ಬಂದಿ? ಚವತಿ ಜಾಗರಕ್ಕೆ ಮುದ್ದಾಂ ಬನ್ರ. ನಿಮ್ಮದು ಮಾತು ಕೇಳದ್ದೆ ರಾಶಿ ದಿನ ಅಗೊತ್ರಾ ಒಡೆಯ!" ಅಂದಾಗ ಇಲ್ಲ ಅನ್ನದೆ ಇರಲು ಸಾಧ್ಯವೇ ಇರುತ್ತಿರಲಿಲ್ಲ. ಅಷ್ಟಕ್ಕೂ ಚೌತಿ ದಿನ ರಾತ್ರಿ ಊಟ ಅಂತು ಬೇಕಾಗಿಲ್ಲ. ದೊಡ್ಡ ಕೆಲಸ ಕೂಡ ಏನು ಇರೋದಿಲ್ಲ. ನಾವೆಲ್ಲ ಸಂಜೆ ಆಗುತ್ತಿದ್ದಂತೆ ಬ್ಯಾಟರಿ ಚೀಲ ಹೆಗಲಿಗೆ ಸಿಕ್ಕಿಸಿ ನಾಣು ನಾಯ್ಕ, ವಿಟ್ಟಲ ನಾಯಕನ ಮನೆ ಕಡೆ ತಾಳಮದ್ದಲೆಗೆ ಹೋಗುವುದು ವಾರ್ಷಿಕ ಪದ್ದತಿಯೇ ಆಗಿತ್ತು.
ಹೊಸತಾಗಿ ಪದ ಕಲಿತ ಹೆಗಡೆ ಮಾಣಿ, ಕರ್ನಾಟಕ ಸಂಗೀತದ ರಾಗಗಳನ್ನ ಯಕ್ಷಗಾನಕ್ಕೆ ಅಳವಡಿಸಿದ್ದೆನೆಂದು ಕೊಚ್ಚುವ ನಾರಾಯಣ ಭಾಗವತ [ ಸೋಬಾನೆ ಪದ್ಯವಾದರೂ ಇನ್ನು ಚೆನ್ನಾಗಿ ಇರುತ್ತಿತ್ತೆನೋ!] ಮೃದಂಗಕ್ಕೆ ದಂತಲಿಗೆ ನಾರಾಯಣ ಹೆಗಡೆ ಇತ್ಯಾದಿಗಳು ಅವಕಾಶಕ್ಕಾಗಿ ಕಾಯುತ್ತಿರುತ್ತಿದ್ದರು. ಇಂತಹ ನಾಯಕರ ಕೇರಿಯ ಯಕ್ಷಗಾನ ತಾಳಮದ್ದಲೆ ಅಂದರೆ ಗರ್ದಿಯೋ ಗರ್ದಿ.
ಒಮ್ಮೆ ಮೊದಲ ಪ್ರಸಂಗ ಮುಗಿಸಿ ನಾನು ಮನೆಗೆ ವಾಪಸ್ ಬಂದಿದ್ದೆ. ಮರುದಿನ ಬಸ್ ನಿಲ್ದಾಣದಲ್ಲಿ ಸಿಕ್ಕ ಧರ್ಮಪ್ಪ "ಭಟ್ರೇ ನಾನು ಹೇಲೂಕೆ ಶುರು ಮಾಡುಕಿಂತ ಮುಂಚೆ ನೀವು ಎದ್ದು ಹೊದ್ರಲ್ರ ಮಾರಾಯ್ರೆ" ಅಂದಾಗ ಅಲ್ಲಿದ್ದ ಜನ ಎಲ್ಲ ಸಿಕ್ಕಾಪಟ್ಟೆ ನಕ್ಕಿದ್ದು ಆಮೇಲೆ ಅದೇ ಧರ್ಮಪ್ಪ ಅಸುಧ್ಧ ಭಾಸೆಯಲ್ಲಿ "ಎಲೆಸೂರಿತೋ ಏನ್ರೋ " ಎಂದು ಕೈ ಮುಂದೆಮಾಡಿದಾಗ ಕವಳ ಸಂಚಿಯಿಂದ ಕರಿ ಎಲೆ ಹೊರತೆಗೆದು ಅಪ್ಪ ಕೊಟ್ಟಾಗಲೇ ಗೊತ್ತಾಗಿದ್ದು ಅವ ಕೇಳಿದ್ದು "ಎಲೆ ಚೂರು ಇದ್ದೋ ಏನೋ" ಎಂದು .
ಒಂದು ಸಲ ಮತ್ತಿ ಮಠದಲ್ಲಿ "ಪಂಚವಟಿ - ವಾಲೀ ವಧೆ" ತಾಳಮದ್ದಲೆ ಪ್ರಸಂಗ. ಇದೆ ನಾರಾಯಣ ಭಾಗವತರ ಹಿಮ್ಮೇಳ!
"ಕಿಚ್ಚಿಗಿರುವೆ ಮುತ್ತಲ್ಉಂಟೆ ಬಚ್ಚಲು-ಮಾಳಿಗೆಯು ಸರಿಯೇ?" ಅನ್ನುವ ಪದ್ಯವನ್ನು ರಾಗವಾಗಿ "ಕಚ್ಚಿಗಿರುವೆ ಮುತ್ತಲ್ ಉಂಟೆ.... ಬಚ್ಚಲು ಮಾಳಿಗೆಯು ಸರಿಯೇ ...." ಎಂದು ಹಾಡಿದಾಗ ಅರ್ಥಧಾರಿ ಬಲವಂತವಾಗಿ ನಗು ತಡೆಹಿಡಿದಿದ್ದು ಮತ್ತು ನಾವೆಲ್ಲಾ ದೊಡ್ಡದಾಗಿ ನಕ್ಕಾಗ ದೊಡ್ಡವರು ಕಣ್ಣು ಕೆಂಪಗೆ ಮಾಡಿದ್ದು ಎಲ್ಲ ಮರೆಯಲು ಹೇಗೆ ಸಾಧ್ಯ?
ಸಂಧಾನದಲ್ಲಿ ಮಾದೇವ ನಾಯಕನ ಭೀಮನ ಪಾತ್ರ. ೬ ಅಡಿ ಎತ್ತರದ ಬೃಹತ್ ಕಾಯದ ಮಾದೆವನಿಗೆ ಇದಕ್ಕಿಂತ ಒಳ್ಳೆಯ ಪಾತ್ರ ಹೊಂದುವುದು ಕಷ್ಟವೇ ಆಗಿತ್ತು. ದ್ರೌಪದಿ ಭೀಮನನ್ನು ಚೆನ್ನಾಗಿ ಕಿಚಾಯಿಸಿದಮೇಲೆ ಮಾದೇವ ಉತ್ತರವಿಲ್ಲದೆ ತಡ- ಬಡಾಯಿಸುತ್ತಿದ್ದ . ಅಂತು ಇಂತೂ ಮಾದೇವನ ಅರ್ಥ ಜೋರಾಗಿಯೇ ಶೌರು ಆಯ್ತು. "ದ್ರೌಪದಿ.... ನಿನಗೆ ಮುಂದಿನ ಅರಿವೆಯೇ ಇಲ್ಲವಲ್ಲ" ಎಂದಾಗ ಮಾತ್ರ ದ್ರೌಪದಿ ಮಾಡಿದ್ದ ದುರ್ಗಿ ಶಂಕರ ಕಕ್ಕಾ-ಬಿಕ್ಕಿ. ಇನ್ನು ಯುಧ್ಧದ ಪ್ರಸಂಗ ಇದ್ದರೆ ಈ ನಮ್ಮ ಶೇರುಗಾರರ ಅರ್ಥಕ್ಕೆ ವಿಶಿಷ್ಟವಾದ ಮೆರುಗು. "ನೀನು ಬಿಟ್ಟ ಬಾಣಗಳನ್ನು ಮುರಿದು ತಟ್ಟಿ ಕಿಂಡಿಯಲ್ಲಿ ಹೆಟ್ಟಿದ್ದೇನೆ " "ಮಹತ್ತಲವಾದ ಮಲವನ್ನು ನಿನ್ನ ಮೇಲೆ ಎತ್ತಿ ಎಸೆದಿದ್ದೇನೆ" [ ರ ಕಾರ ಲ ಕಾರವಾಗಿ ]
ಎಲ್ಲ ನೆನಪಿನಲ್ಲಿರುವ ಕೆಲವು ತುಣುಕುಗಳು....
ಪಂಚವಟಿಯಲ್ಲಿ ಮೂರು ಮಂಡೆಯ ರಾಕ್ಷಸರು ಅನ್ನುವುದನ್ನು "ಮೂರು ಮುಂಡೆಯ ರಕ್ಕಸರು " "ಎಲೈ ಘನಘೋರವಾದ ಸೀತೆ" ಹೀಗೆ ಯಕ್ಷಗಾನ ಜಗತ್ತಿಗೆ ಹೊಸ ಸಾಹಿತ್ಯದ ನಿರಂತರ ಶೋಧನೆಯೇ ನಡೆಯುತ್ತಿತ್ತು. ಕನ್ನಡ ಕಲಾಸರಸ್ವತಿ ತನ್ನ ಕುಲಪುತ್ರರನ್ನು ಕ್ಷಮಿಸಿ ನಗುತ್ತ ಮುನ್ನಡೆಯುತ್ತಿದ್ದಳು ...
ಲೋಹಿತಾಶ್ವನ ಶವವನ್ನು ಕಂಡು ದುಃಖಿಸುವ ಚಂದ್ರಮತಿ "ನಾಯೀ ದೃಶ್ಯವನ್ನು ನೋಡಲಾರೆ" ಅಂದದ್ದು ಸುಧನ್ವನನ್ನು ಕುರಿತು ಪ್ರಭಾವತಿ " ನಾತ! ಎಲ್ಲಿಗಾಗಿ ಹೊರಟಿರುವಿ?" ಅನ್ನುವುದೆಲ್ಲ ತೀರ ಸಾಮಾನ್ಯ...
ಎರಡು ಕಿವಿಯಲ್ಲಿಯು ಉದ್ದುದ್ದ ಕೂದಲು ಇದ್ದ ಶ್ರೀಮಾನ್ ರಾಮಕೃಷ್ಣ ಭಟ್ಟರಿಗೆ ಬೇಕೆಂತಲೇ ಸ್ಯಮಂತಕ ಉಪಾಖ್ಯಾನದ ಸಿಂಹದ ಪಾತ್ರ ನೀಡುತ್ತಿದ್ದರು ನಮ್ಮ ಪಾತ್ರ ಹಂಚಿಕೆಯ ಕಿಲಾಡಿಗಳು. ಕರ್ಣ ಪರ್ವದಲ್ಲಿ ಇನ್ನೊಬ್ಬ ಹೆಸರಾಂತ ಉಪಕಲಾವಿದ ಅಣ್ಣಯ್ಯ ಭಟ್ಟರದ್ದು ಸರ್ಪಾಸ್ತ್ರ. ಬೆಳಗು ಹರಿಯುವ ಮುನ್ನ ಭಾಗವತರು ಉದಯ ರಾಗದಲ್ಲಿ ಪದ್ಯ ಶುರು ಮಾಡಿದ ಮೇಲೆ ಕೊನೆಯ ಕೆಲವು ಪದ್ಯಗಳಲ್ಲಿ ಒಂದು ಮಾತ್ರ ಈ ಸರ್ಪಾಸ್ತ್ರಕ್ಕೆ ಮೀಸಲು. ಆದರೆ ಒಂದುಬಾರಿ ಹೆಚ್ಚು ಸಮಯ ಕಳೆದು ಸರ್ಪಾಸ್ತ್ರದ ಪದ್ಯ ಬಿಟ್ಟು ಪ್ರಸಂಗದ ಮಂಗಳಪದ್ಯ ಶುರುವಾಗಿತ್ತು. ನಮ್ಮ ಸರ್ಪಾಸ್ತ್ರದ ಪಾತ್ರಧಾರಿಗೆ ಅರ್ಥ ಹೇಳಲು ಅವಕಾಶವೇ ಇಲ್ಲವಾಗಿತ್ತು... ಪ್ರಸಂಗ ಮುಗಿದಾದ ಮೇಲೆ ಅಣ್ಣಯ್ಯ ಭಟ್ಟರು ನನ್ನ ಹತ್ತಿರ ಇರುವ ಈ ಸರ್ಪಾಸ್ತ್ರ ಈಗ ಬಿಡಲ ಅಂದಾಗ ನಮಗೆಲ್ಲ ಮಸ್ತ್ ಮಜಾ ಬಂದಿತ್ತು.
ಈಗ ಟೀವಿ ಬಂದಿದೆ.... ಹಳ್ಳಿಯಲ್ಲಿ ಯುವಕರೇ ಇಲ್ಲ... ಇದ್ದರೂ ಯಕ್ಷಗಾನ ಕೇಳುವವರೇ ಇಲ್ಲ...ಯುವಕ ಸಂಘದ ಸದಸ್ಯರೆಲ್ಲ 30-40 ರ ಆಸುಪಾಸಿನ ಮಧ್ಯವಯಸ್ಕರು....ಹಳ್ಳಿ ಸಪ್ಪೆಯಾಗುತ್ತಿದೆ... ನಗರದಲ್ಲಿ ಹಳ್ಳಿಯ ಮುಗ್ಧತೆ ಬರಲಾರದು...
ಆದರೂ "ಕರದ ಗಧೆಯಂ ಪಿಡಿದು ಪೆಗಲೋಳಾoತಾ ಸುಯೋಧನಂ ಹರಿಯುತಿಹ ಹೆಮ್ಮಡುವನುತ್ತರಿಸಿ ರಣ ಧಾರುಣಿಯೋಳು" ಎಂದು ಮನಸಲ್ಲೇ ಗುನುಗುತ್ತ ಈಗಷ್ಟೇ ಬಂದ ಮಿಂಚಂಚೆ ಮೂಲಕ ಬಂದ ಕಡತವನ್ನು ಅವಗಾಹನೆ ಮಾಡುತ್ತೇನೆ...
5 comments:
ನಕ್ಕು ನಕ್ಕೂಸಾಕಾಯ್ತು. ಚೆ೦ದದ ಲೇಖನ ಭಟ್ಟರ್‍ಏ.
ಸೀತಾರಾಮ್ ಸರ್,
ಧನ್ಯವಾದಗಳು.. ಇಲ್ಲಿಯ ಹೆಸರುಗಳು ಕಾಲ್ಪನಿಕ...
ಆದರೆ ಘಟನೆಗಳು ಮಾತ್ರ ಸತ್ಯ.
ಶಿವರಾಂ
ಶಿವಣ್ಣ,
ನಿಮ್ಮೂರಿನ ತಾಳ-ಮದ್ದಳೆಯ ಗಮ್ಮತ್ತನ್ನು ನಮಗೂ ತಲುಪಿಸಿದ್ದೀಯಾ....ಲೇಖನ ಚೆನ್ನಾಗಿದೆ.
ಮಾವ,
ಧನ್ಯವಾದಗಳು
ಶಿವಣ್ಣ
:-)
Post a Comment