Thursday, May 27, 2010

ಮನಸ್ಸಿನೊಳಗಿನ ಮಾತು

 ೭೦ ದಿನಗಳ ಸುದೀರ್ಘ ಅಮೇರಿಕಾ ವಾಸದ ನಂತರ ಸ್ವದೇಶಕ್ಕೆ ಮರಳಿದ್ದೇನೆ. ಅನೇಕ ಹೊಸ ಅನುಭವಗಳಿಂದ ಕೂಡಿದ ಹೊಸ ಸ್ನೇಹಿತರನ್ನು ಗಳಿಸಿಕೊಟ್ಟ ಹೊಸ ಸಂಪರ್ಕ ಕೊಂಡಿಗಳನ್ನು ಕಲ್ಪಿಸಿದ ಬಹು ಯಶಸ್ವೀ ಪ್ರವಾಸ ಇದಾಗಿತ್ತು.


ಸುತ್ತಲೂ ಹಸಿರು ವನಸಿರಿ, ಜುಳು ಜುಳು ಹರಿಯುವ ಕಿರು ತೊರೆಗಳು, ಬಣ್ಣ ಬಣ್ಣದ ಹೂಗಳು, ತಣ್ಣನೆ ಬೀಸುವ ಮಂದ ಮಾರುತ ಶುಭ್ರ ನೀಲಾಕಾಶ, ಬಂಗಾರವರ್ಣದ ಸೂರ್ಯರಶ್ಮಿ ಸೊಂಕಿದೊಡನೆ ಚಿಕ್ಕ ಚಿಕ್ಕ ಮಂಜಿನ ಹನಿಗಳಲ್ಲಿ ಮೂಡುವ ಮರಿಕಾಮನ ಬಿಲ್ಲಿನ ಸೊಬಗು, ತಂಪಾದ ರಾತ್ರಿಯಲ್ಲಿ ಕಿಟಕಿಯಿಂದಲೇ ನನ್ನ ಸುಪ್ಪತ್ತಿಗೆಯ ಮೇಲೆ ಚಿತ್ತಾರ ಮೂಡಿಸಿ ಮನಸ್ಸಿಗೆ ಮುದ ನೀಡುವ ಚಂದಮನ ಸುಂದರ ಬಿಂಬ ಕೆಲವೊಮ್ಮೆ ಅತೀ ಎನ್ನಿಸುವ ಪ್ರಶಾಂತತೆ, ನಾನು ಇಲ್ಲಿ ಇಳಿದಾಗ ಶುಧ್ಧ ಸ್ಫಟಿಕದಿಂದ ಅಲಂಕಾರಿತ ಬಿಳಿ ಸೀರೆ ಉಟ್ಟು ಈಗ ತಾನೇ ತನ್ನ ಗಂಡನ ಕಳೆದು ರೋದಿಸುತ್ತಿರುವ ವಿಧವೆಯಂತೆ ಭಾಸವಾದ ಧರಿತ್ರಿ ಹೊಸ ಇನಿಯನ ಆಗಮನದಿಂದ ಮುದಗೊಂಡು ಬೇಗ ಸಿಂಗಾರಗೊಂಡು ಸಾಲಂಕೃತ ನವ-ತರುಣಿಯಂತೆ ಕಂಗೊಲಿಸತೊದಗಿದ್ದಳು. ಈ ಭಾಗದ ಅಮೆರಿಕ ಇಂದ್ರನ ಪುಷ್ಪಕ ಮಾಲಿನಿಯನ್ನು ನಾಚಿಸುವ ಸಗ್ಗದ

ಪ್ರತಿರೂಪವಾಗಿ ಮಾರ್ಪಟ್ಟಿತ್ತು. ಅಲ್ಲಲ್ಲಿ ಕೊಳಗಳು, ಕೊಳಗಳಲ್ಲಿ ಬಣ್ಣ ಬಣ್ಣ ದ ದೋಣಿಗಳಲ್ಲಿ ವಿಹರಿಸುವ ಚಿಣ್ಣರು, ಸುತ್ತಲು ಎದ್ದು ನಿಂತಿರುವ ಸ್ವಚ್ಚ ಹಸಿರು ಹುಲ್ಲಿನ ನಡುವೆ ಅಲ್ಲಲ್ಲಿ ಹಳದಿ ಚುಕ್ಕಿಯಂತೆ ಕಾಣುವ ಹೂವುಗಳು, ಸುಗಂಧ ಪೂರಿತ ಪುಷ್ಪ ಸೌಗಂಧಿಕೆಯ ಸುಂದರ ಕಾನನ ಆಗೊಮ್ಮೆ ಈಗೊಮ್ಮೆ ಕಾಣುವ ಹರಿಣಗಳು

ಹಸಿರು ಸೀರೆಯ ಕಪ್ಪಂಚಿನ ಮೇಲೆ ಬೆಳಕನ್ನು ಸೂಸುತ್ತ ವೇಗವಾಗಿ ಚಲಿಸುವ ಬಣ್ಣ ಬಣ್ಣದ ಕಾರುಗಳು ಪೋಣಿಸಿದ ಮುತ್ತುಗಳಂತೆ ಹೊಳೆಯುವ ವಿದ್ಯುದ್ದೀಪಗಳು ನೀರವದ ರಾತ್ರಿಯನ್ನು ವರ್ಣಮಯಗೊಲಿಸುತ್ತಿದ್ದರೆ ಭಾವುಕನ ಹೃದಯ, ಮಾಧುರ್ಯ ತುಂಬಿದ ಸರಸಿಯಾಗಿ ಮನಸ್ಸು ಸುಂದರ ಕನಸುಗಳ ಅಲೆಗಳ ತಾಕಲಾಟದಿಂದ ಉಲ್ಲಾಸಗೊಳ್ಳುತ್ತಿತ್ತು.



ಹಳೆಯ ಸ್ನೇಹ ಪುನರುಜ್ಜೀವನಗೊಂಡಂತೆ ಇಲ್ಲಿಯ ನನ್ನ ಪುರಾತನ ಮಿತ್ರರೆಲ್ಲ ದೂರವಾಣಿಯ ಕರೆಯಿಂದ ಇನ್ನಷ್ಟು ಹತ್ತಿರವಾದರು. ಬದುಕಿನ ನಾವೆಯಲ್ಲಿ ಬಹುದೂರ ಸಾಗಿದರೂ ನೆನಪುಗಳ ಮರುಕಳಿಕೆ ಖುಷಿ ಕೊಟ್ಟಿತ್ತು. ಅದೇ ತುಂಟಾಟ ಅದೇ ಹುಡುಗಾಟ ಅದೇ ಹಳೆಯ ಅಡ್ಡ ಹೆಸರು. ಯಾವುದೇ ಬಿಗುಮಾನವಿಲ್ಲದೆ ನಮ್ಮ ಸಿಂಹಾವಲೋಕನ ಗಂಟೆಗಳಕಾಲ ನಡೆದಿತ್ತು. ಈಗ ಮತ್ತೆ ಧನ್ಯವಾದ ಹೇಳುವ ಕಾಲ. ಅವರ ಪ್ರೀತಿಗೆ, ಅದೇ ಹಳೆ ಭಟ್ಟ ಎನ್ನುವ ವಿಶ್ವಾಸಕ್ಕೆ ತಾವಾಗಿ ಕರೆ ಮಾಡಿ ನನ್ನ ಏಕತಾನತೆಯನ್ನ ಅಳಿಸಿದ ಸುಬ್ಬು,ಕಳ್ಳ, ಗಿರಿ, ಹತ್ತು ಎಂಟು ವರ್ಷಗಳ ಹೇಳೆಯ ಭೇಟಿಯನ್ನೂ ನೆನಪಿಟ್ಟು ಕರೆಮಾಡಿದ ನಳಿನಿ ಆಂಟಿ, ಸ್ಥಳೀಯ ಮಾಹಿತಿ ಮತ್ತು ಸಹಾಯವಾಣಿ ಸಿಸ್ಟರ್ ನಿವೇದಿತ, ಪ್ರತಿಮಾ

ಆಫೀಸಿನಲ್ಲಿ ಸಹ-ಉದ್ಯೋಗಿ ಸಹ-ಭೋಜನ ಸಹ-ಪ್ರಯಾಣ ಎಲ್ಲದರಲ್ಲೂ ಉತ್ಶಾಹದಿಂದ ಜೊತೆಗಿದ್ದ ೫೦-೬೦ ರ ಅನುಪಾಸಿನ ಹಿರಿಯರ ತಂಡ, ನಿಮಿಷಾರ್ಧವು ತಡಮಾಡದೆ ಹಾಜರಾಗಿ ನಿತ್ಯವೂ ಹೊಸ ಹೊಸ ಪ್ರಶ್ನೆ ಕುತೂಹಲದಿಂದ ೨೦ ನಿಮಿಷದ ಪ್ರಯಾಣದಲ್ಲಿ ಭಾರತವನ್ನು ಅರಿಯುವ, ಅಮೆರಿಕಾದ ಕಿರು ದರ್ಶನ ಮಾಡಿಸುವ ಕಾರುಚಾಲಕ ಸ್ಟೀವೆನ್, ಹೋಟೆಲ್ಲಿನಲ್ಲಿ ಅಮೆರಿಕಾದ ಚರಿತ್ರೆ ಪಾಠ ಮಾಡುತ್ತಿದ್ದ ಕ್ರೆಗ್ ಹೀಗೆ ಎಲ್ಲವೂ ಒಂದು ಸುಂದರ ನೆನಪು.



ಬೆಂಗಳೂರಿಗೆ ಮರಳುತ್ತಿದ್ದಂತೆ ಇದು "ವಿಕೃತಿ ಸಂವತ್ಸರ" ಎನ್ನುವುದನ್ನು ಒತ್ತಿ ಒತ್ತಿ ಹೇಳಿದಂತೆ ಭಾಸವಾಗುತ್ತಿತ್ತು. ಹಗರಣಗಳ ಮೇಲೆ ಹಗರಣ, ಹಾಲಪ್ಪ, ನಿತ್ಯಾನಂದ, ಮೋದಿ, ತರೂರ್, ನೈಸು, ರಾತ್ಹೊರ್, ಕಸಬ್ ಅಪಘಾತ, ಅತೃಪ್ತಿ ಹೀಗೆ ನಿತ್ಯವೂ ಮನಸ್ಸನ್ನು ವಿಚಲಿತಗೊಳಿಸುವ, ಗೊಂದಲದ ಗೂಡಾಗಿಸುವ ನೂರಾರು ಕಾರಣಗಳು, ಹೊಸ ಶಬ್ದಗಳು ನನ್ನ ನಿಘಂಟನ್ನು ಸೇರಿವೆ.....



ಒಂದು ವಾರದ ಊರಿನ ಪ್ರವಾಸ ಮನಸ್ಸಿಗೆ ಮುದ ನೀಡಿತ್ತು.

ಯಲ್ಲಾಪುರ ಹಿಂದಿನ ಏಲಾಪುರವಾಗಿ ಉಳಿದಿಲ್ಲ. ಏಳಕ್ಕಿಗೆ ಬೆಲೆ ಬಂದಿದ್ದರೂ ತೋಟಗಳಲ್ಲಿ ಎಲಕ್ಕಿಯೇ ಇಲ್ಲ.

ಹಳ್ಳಿಯಲ್ಲಿ ಜನ ಕೃಷಿಯಿಂದ ಬಹಳ ಬೇಗ ವಿಮುಖರಾಗಿ ಹತಾಶೆಯ ಭಾವ ಹೆಪ್ಪುಗಟ್ಟಿ ಹಣಗಳಿಕೆಯ ಸುಲಭ ಮಾರ್ಗದತ್ತ ಮನಸ್ಸು ಮಾಡಿರುವುದು

ಎದ್ದು ಕಾಣುತ್ತಿತ್ತು. ರೇಶನ್ ಕಾರ್ಡ್ ತೆಗೆದುಕೊಂಡು ಉದ್ಯೋಗ ಖಾತ್ರಿಯ ಹಣ ಪಡೆದುಕೊಳ್ಳುವಲ್ಲಿಯ ಪೈಪೋಟಿ, ನಿತ್ಯವೂ ಪಂಚಾಯತ ಆಫೀಸಿನ ಎದುರು ಜಮಾಯಿಸುವ ಜಂಗುಳಿ, ಗ್ರಾಮಪಂಚಾಯತಿಯ ಸ್ಪರ್ಧಾಳುಗಳನ್ನು ನೋಡಿದರೆ ಈ ಹೊಸ ಬದಲಾವಣೆ ಗ್ರಾಮೀಣ ಜೀವನವನ್ನು, ಜನರನ್ನು ಕಂಗೆಡಿಸಿರುವುದು

ಅಭ್ಯರ್ಥಿಗಳು ಕಳಿಸುವ ವಾಹನಕಾಗಿ ಕಾದು, ಅವರು ಕೊಡುವ ಬಿಡಿಗಾಸನ್ನು ಪಡೆದು ಸಂಭ್ರಮಿಸುವ ಅಲ್ಪ ತೃಪ್ತಿಯ ಮಹನೀಯರನ್ನು ನೋಡಿದರೆ ವ್ಯವಸ್ಥೆಯ ಭೀಕರತೆ, ಭ್ರಷ್ಟತೆ ಭಯ ಹುಟ್ಟಿಸುವಂತಿತ್ತು. ಮತ್ತೆ ಗಾಣದ ಎತ್ತಾಗಿ ಬೆಂಗಳೂರಿನ ಅಸಂಖ್ಯಾತ ಜೀವಿಗಳಲ್ಲಿ ಒಬ್ಬನಾಗಿ ಹಳೆಯ ಬದುಕಿಗೆ ಹೊಂದಿಕೊಳ್ಳುತ್ತಿದ್ದೇನೆ.

ಮುದ್ದು ಮಕ್ಕಳ ಅಮೂಲ್ಯ ಬಾಲ್ಯಕ್ಕೆ ಅರ್ಥ ಕೊಡುವ ತಂದೆಯ ಕೆಲಸ, ಕುಟುಂಬದ ಜಾವಬ್ದಾರಿಗಳ ನೊಗಕ್ಕೆ ಮತ್ತೊಬ್ಬ ಎತ್ತಾಗಿ ಸುಂದರ ಭವಿಷ್ಯದ ಕನಸುಗಳ ನಡುವೆ

ಎರಡು ಗಂಟೆಯ ಬಸ್ಸಿನ ಪ್ರಯಾಣದಲ್ಲಿ ಒಂದಷ್ಟು ಓದು. ಈಗ ಮತ್ತೆ ಬ್ಲಾಗಿನ ಲೋಕಕ್ಕೆ ಹೊಸ ವಿಚಾರದೊಂದಿಗೆ ಮರಳುವ ಆಸೆ.

ಅಪೂರ್ಣವಾಗಿದ್ದ ಬರಹಗಳಿಗೆ ಮರು ಜೀವ ತುಂಬಬೇಕಾಗಿದೆ. ಬಸ್ಸಿನಲ್ಲಿ ಬರುವಾಗ ಸಿಕ್ಕ ಕೀರ್ತನಕಾರ ರಾಮಕೃಷ್ಣ ಭಟ್ಟರೊಂದಿಗಿನ ಮಹಾಭಾರತ ಚರ್ಚೆ ಅಪೂರ್ಣವಾಗೆ ಉಳಿದು ಹೋಗಿದೆ. ಅಧುನಿಕ ವಿಕಾಸವಾದದ ತಳಹದಿಯಲ್ಲೇ ಪುರಾಣದ ದ್ವಂದ್ವಗಳಿಗೆ ಉತ್ತರಿಸಿದ ಅವರ ಚತುರತೆ ಮೆಚ್ಚುವಂತಿತ್ತು.

ಮನುಧರ್ಮ ಶಾಸ್ತ್ರವನ್ನು ಮತ್ತೊಮ್ಮೆ ಓದುವ ಹಂಬಲ ಹೊತ್ತಿಸಿದ್ದು ಅವರೇ.

ಹಳೆಯ ಹವ್ಯಾಸಗಳು ಮತ್ತೆ ಚಿಗುರೊಡೆಯ ತೊಡಗಿವೆ. ಯಕ್ಷಗಾನದ ತಾಳ ಬೆಂಗಳೂರಿಗೆ ಬಂದಿದೆ. ಇರಾವತಿ ಕರವೇಯವರ ಯುಗಾಂತ ಮೈಕೊಡವಿ ಧೂಳನ್ನು ನಿವಾರಿಸಿ ತೊಡೆಗನಕದ ಚೀಲವನ್ನು ಸೇರಿದೆ. ಯಕ್ಷಗಾನದ ೮೦ ಪ್ರಸಂಗಗಳ ಪ್ರತಿಗಾಗಿ ಬೇಡಿಕೆ ಇಟ್ಟಾಗಿದೆ. ನೋಡೋಣ ಭಗವಂತೆ ಮುಂದೆ ಹೇಗೆ ಅಡಿಸುತ್ತಾನೆಂದು!!

1 comment:

Narayan Bhat said...

ಶಿವಣ್ಣ,
ಮನ ಮುಟ್ಟಿದ ಬರಹ ಇದು...ನಾವಂದುಕೊಂಡಂತೆ ಭಗವಂತ ಅಲ್ವಾ..