Thursday, May 31, 2012

ಮಾಳ ಕಾವಲು

ಮಾಳ ಕಾವಲು!!

 

ಚಳಿಗಾಲದಲ್ಲಿ ಭತ್ತದಗದ್ದೆ ಬೆಳೆದುನಿಂತು ಹೊಡೆ  ತುಂಬಿ  ಹಾಲು ಭತ್ತ , ಭತ್ತದ ಕಾಳು ಆಗುವ ಸಮಯದಲ್ಲಿ ಹಂದಿಗಳ ಕಾಟವೂ ಜೋರಾಗಿಯೇ ಇರುತ್ತಿತ್ತು.ಹಂದಿಗಳಿಗೆ ಉಪಕಾರವಾಗಲೆಂದು ಸೂರ್ಯ  ಕೂಡ ಪಡುವಣ ದಿಗಂತದಲ್ಲಿ ಬೇಗನೆ ಅಸ್ತಂಗತನಾಗುತ್ತಿದ್ದ. ಛಳಿಯಲ್ಲಿ ನಿಷೆಯನ್ನು ಅಪ್ಪಿ ಸುಖನಿದ್ದೆ ಸವಿಯುವ ತವಕವಿರಬೇಕು! ಹಂದಿಗಳಿಗೋ   ಸಂಭ್ರಮವೋ ಸಂಭ್ರಮ. ಎಳೆಯ ಅಡಿಕೆ ಬಾಳೆ ಗಿಡಗಳ  ತಿರುಳನ್ನು  ತಿವಿದು ತಿನ್ನುವ ಸೌಭಾಗ್ಯ!!.ವರ್ಷ-ಶರದ್  ಋತುಗಳು  ಕಳೆದು ಹೇಮಂತನನ್ನು ಬೀಳ್ಕೊಟ್ಟು ಶಿಶಿರನ   ಆಗಮನವಾಗುತ್ತಿದ್ದಂತೆಯೇ ಶೀತಲ ಸಮೀರಣನು ಮಂಜಿನ ಹನಿಗಳನ್ನು ಹೊತ್ತು ಸುಯ್ಯೆಂದು ಬೀಸುತ್ತಾ ಇಡೀ ಮಾನವ ಕುಲವನ್ನು ನಿದ್ದೆಯ ಅಮಲಿಗೆ ನೂಕುತ್ತ  ವರಾಹ ಸಂಕುಲಕ್ಕೆ ಸಮಾರಾಧನೆಯ  ಅನುಕೂಲ ಕಲ್ಪಿಸುತ್ತಾನೆ.ಬಿತ್ತಿದ ಫಸಲು  ಬೆಳೆದು ನಿಂತು ಇನ್ನೇನು ಕೈಗೆ ಸಿಗುತ್ತದೆ ಅನ್ನುವಾಗ ಕಾಡಿನ ಪ್ರಾಣಿಗಳಿಗೆ ಅಸಾಧಾರಣ ಹಸಿವೆಯನ್ನು ಹುಟ್ಟಿಸಿ ಫಸಲಿಗೆ ಧಾಳಿಯಿಡುವಂತೆ ಪ್ರೇರೇಪಿಸುತ್ತಾನೆ.  
ಹಂದಿಯ ಹುಟ್ಟು ಕೃತಯುಗದಲ್ಲೋ ತ್ರೆತಾಯುಗದಲ್ಲೋ ಆಗಿರಬೇಕು. ವಿಷ್ಣುವಿನ  ಮೂರನೇ ಅವತಾರವಾದ  ವರಾಹ ಪುರಾಣ ಚಳಿಗಾಲದಲ್ಲಿ ತುಂಬಾ ಪ್ರಚಲಿತ. ರಾತ್ರಿಯಲ್ಲಿ ಮಾತ್ರ ಈ ದೇವರ ಪುರಾಣ  ರೈತನಿಗೆ ಸಂತೋಷ ನೀಡದು.  ಒಂಟಿ ಹಂದಿಗೆ "ಎಕ್ಕಲಿಗ" ಅನ್ನುತ್ತಿದ್ದೆವು. ಹಂದಿಯ ಭಯ ಎಷ್ಟಿತ್ತೆಂದರೆ ಕತ್ತಲಾದಮೇಲೆ ಈ ಹಂದಿ- ಶಬ್ದವನ್ನು ಕೂಡ ಬಳಸಬಾರದೆಂದು ಹಿರಿಯರ   ಆಜ್ಞೆಯಾಗಿತ್ತು . ಭೂಮಿಯನ್ನು ಮೇಲೆತ್ತಿ ಮತ್ತೆ ಕಕ್ಷೆಗೆ ಸೇರಿಸಲು ಮಹಾವಿಷ್ಣು   ವರಾಹವನ್ನೇ   ಯಾಕೆ ಆಯ್ಕೆ ಮಾಡಿಕೊಂಡ?. ಬಹುಷಃ ಮಹಾವಿಷ್ಣುವೂ ರೈತ ವಿರೋಧಿಯೇ ಇರಬೇಕು! ಅತ್ಯಂತ ಉಪಟಳ ಕೊಡುವ ಪ್ರಾಣಿಯಾಗಿ ಕೃಷಿಕರನ್ನು ಕಾಡಿ  ಗೃಹಗತಿಯನ್ನು ಬದಲಾಯಿಸುವ ವಿಶಿಷ್ಟ ಅವತಾರ ಅನ್ನುವುದಂತೂ ಸತ್ಯ. 
ಚಳಿಗಾಲ ಬಂದೊಡನೆ ಮಲೆನಾಡಿನ ಕೃಷಿಕರಿಗೆ ಕೈತುಂಬಾ ಕೆಲಸ. ಜಮೀನಿನ ಒಡೆಯನಿಗೋ ಚಳಿಗಾಲದ ಸುಂದರ ರಾತ್ರಿಯನ್ನುಗದ್ದೆಯ ನಡುವೆ ಮೈ ಕೊರೆಯುವ ಶೀತಗಾಳಿಯ ತೀಡುವಿಕೆಯ ಅಸಾಧಾರಣ  ನೋವಿನಲ್ಲಿ ಕಳೆಯುವದೊಂದು ಶಾಪ.  "ಬೆಚ್ಚನೆಯ ಮನೆಯಿರಲು ಇಚ್ಚೆಯನು ಅರಿತು ನಡೆಯುವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚುವದು"  ಮಾಳಕಾವಲಿನಲ್ಲಿ ಸಾಧ್ಯವೇ ಇಲ್ಲ. ಸರ್ವಜ್ಞನಿಗೆ ಮಾಳಕಾವಲು ಗೊತ್ತಿರಲಿಕ್ಕಿಲ್ಲ ಬಿಡಿ.  ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಹೊಲದ ಯಜಮಾನ  ಸಂಜೆ ಮಾಳ ಕಾಯಲು ಬರಲೇ ಬೇಕು. "ಮಾಳ ಕಾಯುವುದು" ಯಾಕೆ ಅನ್ನುವುದು ನನಗೆ ಆಗಲೂ ಅರ್ಥ ಆಗಿರಲಿಲ್ಲ.ಮಾಳ ಅಂದರೆ ನಾಲ್ಕು ಕಾಲಿನ ಹಂದರಕ್ಕೆ ಹರಕು ಸೋಗೆಯ ಹೊದಿಕೆ ಎಂದೆ ಭಾವಿಸಿದ್ದೆ. 
ಮಾಳವೆಂದರೆ ಬಯಲು ಎಂದರ್ಥ. ಬೆಳೆ ಬೆಳೆಯುವ  ಬಯಲನ್ನು ಕಾಯುವುದಕ್ಕೆ "ಮಾಳ- ಕಾಯುವುದು" ಎಂದರೆ ಹೊಲವನ್ನು ಕಾಯುವುದು ಎಂದೆ ಅರ್ಥ. ಆದರೆಮಲೆನಾಡಿನ ಯಾರನ್ನೇ ಕೇಳಿ "ಮಾಳ" ಎಂದೊಡನೆ ನಾಲ್ಕು ಕಾಲಿನ ಹರಕು ಹಂದರವೇ ಬಿತ್ತಿ ಪಟಲದಲ್ಲಿ ಸುರುಳಿಯಾಗಿ ತೆರೆದುಕೊಳ್ಳುತ್ತದೆ.ಸದ್ಯ ಮಾಳಕಾಯುವವನನ್ನೇ ಕಾಯುವ ಪರಿಪಾಠ ಮಾತ್ರ ಬರಲಿಲ್ಲವಲ್ಲ ಎಂದು ಸುಮ್ಮನಿದ್ದೆ. ಆದರೂ ಈ- ಮಾಳ ಕಾಯುವ ಅಲ್ಲ - ಗದ್ದೆ ಕಾಯುವ ಕೆಲಸ ಒಂದು ವಿಶಿಷ್ಟ ಅನುಭವ!.  ಇಡೀ ವರ್ಷ "ಉತ್ತು - ಬಿತ್ತಿ -ಬೆಳೆ" ದ ಪೈರನ್ನು ಕ್ಷಣಾರ್ಧದಲ್ಲಿ ಧೂಳಿ ಪಟ ಮಾಡುವ ಹಂದಿಗಳ ಹಿಂಡಿನ ಶಕ್ತಿ ಗೆ ಬಡಪಾಯಿ ರೈತನ ಬಳಿ ಕಾಯುವುದನ್ನು ಬಿಟ್ಟರೆ ಬೇರೆ ಉಪಾಯ ಇರಲೇ ಇಲ್ಲ. ಮಾಳ ಕೇವಲ ಗದ್ದೆಗೆ ಸೀಮಿತವಲ್ಲ. ಕಾಯುವ ಅಗತ್ಯವಿರುವ ಯಾವ ಬೆಳೆಯೇ ಆದರೂ ಈ "ಮಾಳವೆಂಬ" ಏಕವ್ಯಕ್ತಿ ಅರಮನೆಯ ಹುಟ್ಟಿಗೆ ಕಾರಣವಾದೀತು..

 ಬೇಲಿ ಇದ್ದರೂ ಕಾಯುವ ಕಷ್ಟ ತಪ್ಪಿದ್ದಲ್ಲ. ಕಬ್ಬು-ಅಡಿಕೆ ತೋಟಗಳಲ್ಲೂ ಮಾಳ ಇರುತ್ತಿತ್ತು.  ಚಳಿಯಲ್ಲಿ ಕುರುಡ ಲ್ಯಾಂಪು ಹಿಡಿದು ಮಂಜುಗಡ್ಡೆಯಂತಹ ಇಬ್ಬನಿಯ ನೀರಿಂದ ಆವೃತವಾದ ನೆಲವನ್ನು ತುಳಿಯುತ್ತ ಗದ್ದೆಯ   ಕಡೆಹೆಜ್ಜಹಾಕುವಾಗ  ಯಾವ ಪುಣ್ಯಾತ್ಮ ಈ ಮಾಳ ಕಂಡು ಹಿಡಿದನೋ ಅನ್ನಿಸುತ್ತಿತ್ತು. ತೋಟ ದಾಟಿ ಒಂದು ಗುಡ್ಡ ಹತ್ತಿ ಇಳಿದರೆ ನಮ್ಮ ಗದ್ದೆ. ಗದ್ದೆಯ ಎರಡೂ ಪಕ್ಕದಲ್ಲಿ ನೀರಿನ ಚಿಕ್ಕ  ತೊರೆ ಅಥವಾ ಅಗಳ. ಅದಕ್ಕೆ ದಾಟಲು ಒಂದು ಸಂಕ. [ತೊರೆಯ ಎರಡು ದಂಡೆಯನ್ನು ಜೋಡಿಸುವ ಮರದ ದಿಮ್ಮಿಯ ಸೇತುವೆಗೆ ಸಂಕ ಎನ್ನುವ ನಾಮಕರಣ.  ] ಕತ್ತಲಲ್ಲಿ, ಕಾಲು ಸಂಕದ ಪಕ್ಕಕ್ಕೆ ಇಟ್ಟರೆ ಪಾತಾಳ ದರ್ಶನ!!. ಹಗಲಲ್ಲೇ ಸಂಕ ದಾಟಲು ಒದ್ದಾಡುವ ಪಟ್ಟಣಿಗರಿಗೆ ಕುರುಡು ಲ್ಯಾಂಪಿನ  ದೀಪದಲ್ಲಿ ಸಂಕ ದಾಟಲು ಹೇಳಬೇಕು. ಈ "ಕುರುಡು ಲ್ಯಾಂಪು" ಅನ್ನುವ ಪದ ಪ್ರಯೋಗ ಅದು ಕೊಡುವ ಸಮಸ್ಯೆಯಿಂದ ಸಿಟ್ಟಾಗಿ ನಾನು ಇಟ್ಟದ್ದು. ದೀಪದ ಬೆಳಕು ಹೆಚ್ಚಿಸಲು ಬತ್ತಿ ಮೇಲೆ ಎಳೆದರೆ ನನ್ನ ಸಂತೋಷ ಕೆಲವು ನಿಮಿಷ ಮಾತ್ರ ಉಳಿಯುತ್ತಿತ್ತು. ಲ್ಯಾಂಪಿನ ಗಾಜು ಕಪ್ಪನೆಯ ಇಂಗಾಲ ಕವಿದು ಬೆಳಕು ಹೊರಬರದಂತೆ ಅಡ್ಡವಾಗಿ ಬಿಡುತ್ತಿತ್ತು. ಈ ಗಾಜನ್ನು ಒರೆಸಲು ನಾಜೂಕುತನ ಬೇಕು. ಸ್ವಲ್ಪ ಇಬ್ಬನಿ ತಾಗಿದರೂ ಫಳಾರ್ ಎಂದು ಒಡೆದರೆ ದೇವರೇ ಗತಿ. ಅತ್ತ ಮಾಳವೂ ದೂರ. ಇತ್ತ ಮನೆಯು  ದೂರ. ತೋಟದ ಸೊಪ್ಪಿನ ಜಿಗ್ಗಿನ ನಡುವೆ ಅವಿತು ಕೂತಿರುವ "ಹಪ್ರಿಯ" ಹಾವನ್ನು ನೆನೆದರೆ ನಿಂತಲ್ಲಿಯೇ ನಿಂತು ಬೆಳಗು ಮಾಡಬೇಕು ಅನ್ನಿಸುತ್ತಿತ್ತು!
ಕಲ್ಲಿನ ಕಟ್ಟೆಯ ಕೋಟೆಯೊಳಗೆ ಭದ್ರವಾಗಿರುವ ಜಮೀನಿಗೆ ಈ ಮಾಳ ಕಾಯುವ ಸಮಸ್ಯೆ ಇರಲಿಲ್ಲ. ಆದರೆ ಎಲ್ಲ ಜಮೀನೂ ಒಂದೇ ರೀತಿ ಇಲ್ಲವಲ್ಲ...... ಕಲ್ಲಿನ ಬೇಲಿಯನ್ನು ಕಟ್ಟುವಷ್ಟು ಸಮಯ ಹಣ ಶ್ರಮ ಪೂರ್ವಿಕರ ಬಳಿ ಇರಲಿಲ್ಲವೇನೋ... ಕಷ್ಟದ ಕಾಲ... ವಿದ್ಯುತ್ ಬೇಲಿಯಿಂದ ಆದ ಉಪಕಾರಕ್ಕಿಂತ ಅನಾಹುತವೇ ಹೆಚ್ಚಾಗಿತ್ತು. ಅನೇಕ ದನ-ಕರು ಅಷ್ಟೇ ಏಕೆ ಮನುಷ್ಯರನ್ನು ಸಹ  ಬಲಿ ತೆಗೆದುಕೊಂಡಿತ್ತು. ಈಗ ಹಂದಿಯ ಸಂತತಿಯು ಪಟ್ಟಣಕ್ಕೆ ಒಲಸೆ ಹೋಗಿರುವಂತೆ ಕಾಣುತ್ತಿದೆ. ಮಾಳ ಬೇಕಾಗಿಯೇ ಇಲ್ಲ. ಬಿ ಪಿ ಓ, ಆಯ್ ಟಿ, ಬಿ ಟಿ   ಬೆಂಗಳೂರಿಗೆ ಬಂದಾಗಿನಿಂದ ಈ ಬದಲಾವಣೆ ಇರಬೇಕೇನೋ... ಗದ್ದೆ ಲಾಭದಾಯಕವಾಗಿ ಉಳಿದಿಲ್ಲ. ಅಡಿಕೆಗೆ ಮಾನ ಬಂದಾಗಿನಿಂದ ಭತ್ತದ ಗದ್ದೆಗಳೆಲ್ಲ ರೂಪಾಂತರ ಹೊಂದಿವೆ. ಅಡಿಕೆಯ ಹಣದಿಂದ "ವಿದ್ಯುಡ್ಬೇಲಿ" ಬಂದಿದೆ.
ಮಾಳಗಳಲ್ಲಿ ಹಲವು ವಿಧ.  ಒಂಟಿ ಕಾಲಿನ ಮಾಳ, ನಾಲ್ಕು ಕಾಲಿನ ಮಾಳ, ಎರಡು ಕಾಲಿನ ಮಾಳ, ಹೆಂಚಿನ ಮಾಳ, ಹುಲ್ಲಿನ ಮಾಳ, ಸೋಗೆಯ ಮಾಳ, ಅಡಿಕೆ ದಬ್ಬೆಯ ಮಾಳ, ಮರದ ಹಲಗೆಯ ಮಾಳ, ನಪ್ಪೆಯ ಮಾಳ...ಎಲ್ಲ ಅವರವರ ಅನುಕೂಲಕ್ಕೆ ತಕ್ಕ ಹಾಗೆ ನಿರ್ಮಾಣ. ಮನೆಯ ಹತ್ತಿರವಿದ್ದರೆ ಹಲಗೆಯ ಮಾಳ. ಕಳ್ಳ ಕಾಕರ ಭಯವಿಲ್ಲ ... ಮನೆಯಿಂದ ದೂರವಿರುವ ಮಾಳದ ಸ್ಥಿತಿ ಕಂಡರೆ ಮರುಕ ಪಡುತ್ತೀರಿ. ತಿರುಕನೂ ಬಳಸದ ಹರಕು ಮುರುಕು ಮಾಳ  ಅತ್ಯಂತ ಶೈಥಿಲ್ಯ ಬಂದ ಸ್ಥಿತಿಯಲ್ಲಿ ಇರುತ್ತದೆ. ಕಡಿಮೆ ಖರ್ಚಿನಲ್ಲಿ ಶ್ರಮದಲ್ಲಿ ನಿರ್ಮಾಣಗೊಂಡಿರುತ್ತದೆ. ...
ಚಿತ್ರದಲ್ಲಿ ಇರುವ ಮಾಳವನ್ನೇ ನೋಡಿ. ನನ್ನ ಮಾತಿನ ಅರ್ಥ ಮತ್ತು ಸತ್ಯ ಗೊತ್ತಾಗುತ್ತದೆ.  ಮಳೆ ಬಂದರೆ ಎಲ್ಲ  ದಿಕ್ಕುಗಳಿಂದಲೂ  ನೀರು!!  ಮಧ್ಯ ರಾತ್ರಿಯಲ್ಲಿ ತಂಪಾದ ಶುಧ್ಧೋದಕ ಸ್ನಾನ.  ಮಾಳ ದ ಮಾಟ  ಹೇಗೆ ಇರಲಿ ಅಲ್ಲಿಯ ವ್ಯವಸ್ಥೆ ಎಲ್ಲ ಒಂದೇ ರೀತಿ... ಶೌಚಾಲಯ ಇರುವ ಮಾಳ ಒಂದನ್ನು ನಾನಂತೂ ಕಂಡಿಲ್ಲ..... ಇತ್ತೀಚಿಗೆ ಸಿಮೆಂಟ್ ಕಂಬಗಳ ಮೇಲೆ ನಿಂತ ಆಧುನಿಕ ರೆಸಾರ್ಟ್ ಗಳಲ್ಲಿ ನಿರ್ಮಿಸಲ್ಪಟ್ಟ ಮಾಳಗಳಲ್ಲಿ ಶೌಚಾಲಯ ಇರಬಹುದೇನೋ. ನಗರದ ಪ್ರವಾಸಿಗರಿಗೆ ಎಂದೆ ಈ ಕೃತಕ ಮಾಳದ ನಿರ್ಮಾಣ.  ಮಾಳದತುದಿಯಲ್ಲಿ ಕುಳಿತು ಸುತ್ತಲೂ ಕವಿದಿರುವ ಕತ್ತಲೆಯ ಏಕಾಂತದಲ್ಲಿ ನಿರಾತಂಕವಾಗಿ ವಿಸರ್ಜನೆಯ ಸುಖ ಅನುಭವಿಸಬಹುದು.  "ನ್ಯೂಟನ್ನನಗುರುತ್ವಾಕರ್ಷಣೆ ನೀರಿಗೂ ಅನ್ವಯ" ಆಗುತ್ತದೆ ಎಂದು ವಿಜ್ಞಾನ   ತಲೆಗೆ ಹತ್ತಿದ್ದೇ ಈ ಮಾಳ ಕಾವಲಿನಲ್ಲಿ.ಮಾಳಗಳು  ಮಂಚಗಳ  ಹಾಗಲ್ಲ . ಜೋಡಿ ಮಂಚಗಳು ಇರುವ ಹಾಗೆ ಉಭಯತರು ಶಯನಿಸುವ ಜೋಡಿ ಮಾಳಗಳು ವಿರಳ.   ಎಲ್ಲ  ಏಕ  ವ್ಯಕ್ತಿ  ಮಾಳಗಲೇ. ಇಂತಹ ಮಾಳಗಳು ಒಂದು ಪ್ರೇಮ ಕಾದಂಬರಿಗೆ ಸಾಲುವಷ್ಟು ಸರಕನ್ನು ಒದಗಿಸುತ್ತವೆ ಅಂದರೆ ನಂಬಲೇ ಬೇಕು.
ಮಾಳ  ಕಾವಲು ಬಂತೆಂದರೆ ನನಗೆ ಖುಷಿಯೋ ಖುಷಿ. ಮಾಗೋಡು ಕಾಲೋನಿಯಲ್ಲಿ ವರ್ಷಕ್ಕೊಮ್ಮೆ ಚೌತಿಯ ಉತ್ಸವದಲ್ಲಿ ಶಾಲೆಯ ನಾಟಕ. ನಾಟಕದಲ್ಲಿ ನನ್ನದು ಸಿನೆಮಾ ನಟನ ಪಾತ್ರ. ಅದಕ್ಕಾಗಿ ಅಪ್ಪ ನನಗೆ ಒಂದು ಕೋಟು ಹೊಲಿಸಿ ಕೊಟ್ಟಿದ್ದರು. ದಪ್ಪ  ಬಟ್ಟೆಯ ಕಪ್ಪು ಬಣ್ಣದ ಪ್ಯಾಂಟು. ನಾಟಕ ಮುಗಿದ ಮೇಲೆ ಅದರ ಉಪಯೋಗ ಆಗಿದ್ದು ಮಾಳಕಾವಲಿನಲ್ಲಿ ಮಾತ್ರ. ನಿತ್ಯವೂ ಸಿನಿಮಾ ನಟನ ಉಡುಗೆ! ಒಮ್ಮೊಮ್ಮೆ ಮಾಳದಲ್ಲಿ ಮಜಾ ಮಾಡಲು  ಬಿಸಿಲು ಅವಲಕ್ಕಿ, ಮಂಡಕ್ಕಿ-ಖಾರ ತೆಗೆದುಕೊಂಡು ಹೋಗುತ್ತಿದ್ದೆ. ದೊಡ್ಡ ಗದ್ದೆಯ ಬೈಲಿನಲ್ಲಿ ಹತ್ತಾರು ಮಾಳಗಳು.  ಊಟವಾದಮೇಲೆ ತಡಮಾಡದೆ ಲ್ಯಾಂಪಿನ  ಇಂಗಾಲವನ್ನು ಅದಕ್ಕೆಂದೇ ಇರುವ ಬಟ್ಟೆಯಲ್ಲಿ ನಾಜೂಕಾಗಿ ಒರೆಸಿ ಒಮ್ಮೆ ಅದರ ಬುಡವನ್ನು ಅಲುಗಾಡಿಸಿ ಸೀಮೆ ಎಣ್ಣೆಯ ಮಟ್ಟ ಪರೀಕ್ಷೆ ಮಾಡಿ ಎಣ್ಣೆ ತುಂಬಿಸಿ ಹೊರಡುತ್ತಿದ್ದೆ. ಮಾಳದಲ್ಲಿ ಓದಲು  ಬಗಲಲಿ ಒಂದು ಪುಸ್ತಕ.   ಹೀಗೆ ಸಿಧ್ಧನಾಗಿ  ಅರ್ಧ ಕಿಲೋಮೀಟರು ಹಾದಿ ನಡೆದು ಮಾಳ ಸೇರಿಕೊಳ್ಳುತ್ತಿದ್ದೆ. ದೂರದಲ್ಲಿ ನಾಯಿ ಬೊಗಳುವ ಶಬ್ದ.ಕಾಲುವೆಯಲ್ಲಿ ಜುಳು ಜುಳು ಹರಿಯುವ ನೀರಿನ ಶಬ್ದ. ದೂರದ ಅಡವಿಯಲ್ಲಿ ಕಿರ್ರ್ ಕಿರ್ರ್ ಎಂದು ನಿರಂತರ ಲಯಬಧ್ಧವಾಗಿ ಶಬ್ದ ಮಾಡುವ ಕೀಟಗಳು. ದೂರದಲ್ಲೆಲ್ಲಿಂದಲೋ ನನಗಿಂತ ಮೊದಲೇ ಮಾಳಕ್ಕೆ ಬಂದ್ದವರ "ಛೂ ಛೂ " ಅನ್ನುವ ಕೂಗು ಕೇಳುತ್ತಿತ್ತು. ಚಳಿಗಾಲದಲ್ಲಿ ಸುದೂರದಿಂದ ಅಡೆತಡೆಯಿಲ್ಲದೆ ಹರಿದುಬರುವ ವೈಶಿಷ್ಟ್ಯ ಪೂರ್ಣ ಶಬ್ದಗಳಲ್ಲಿ ಒಡಕು ಡಬ್ಬಿಯ  ದಬ ದಬ ಕೊಟ್ಟoಡೆಯಾ  ಟಂ ಟಂ ಪ್ರಮುಖವಾದವು.  ಗದ್ದೆಯ ಇನ್ನೊದು ಬದಿಯಿಂದ ನನ್ನಂತೆಯೇ ಮಾಳಕ್ಕೆ ಹೋಗುವವರ ಮಿಣುಕು ದೀಪ ಚಲಿಸುವಡು ಕಾಣುತ್ತಿತ್ತು.  ದಟ್ಟ ಕತ್ತಲಿನ ನಡುವೆ ಒಮ್ಮೊಮ್ಮೆ ಸುಂದರ ಕನಸುಗಳ ಲಹರಿ ಶುರುವಾದರೆ ಒಮ್ಮೊಮ್ಮೆ ಭೂತ ಪ್ರೇತ ಪಿಶಾಚಿಗಳ ಭಯ ಶುರುವಾಗುತ್ತಿತ್ತು. ಗಂಟಲು ಹರಿಯುವಷ್ಟು ದೊಡ್ಡ ಧ್ವನಿಯಲ್ಲಿ ಛೂ ಹಾಕಿದವ ಮಾಳಕಾಯಲು ಬಹಳ ಲಾಯಕ್ಕು. ಗದ್ದೆಯಲ್ಲಿ ಗಲಾಟೆ ಮಾಡಿದರೆ ಮತ್ತಷ್ಟು ಉತ್ತಮ. ಹಂದಿ ಹೆದರಿತ್ತೋ ಇಲ್ಲವೋ ನನ್ನ ಭಯವಂತೂ  ಇದರಿಂದ ದೂರವಾಗುತ್ತಿತ್ತು.

ಹಂದಿಗಳಿಗೆ  ಮನುಷ್ಯ  ಪ್ರಾಣಿಯೆಂದರೆ ಭಯವಂತೆ ! ಸುಮ್ಮನೆಮನುಷ್ಯ ಮಾಳದಲ್ಲಿ ಮಲಗಿದರೂ  ಹಂದಿಗಳ ಹಿಂಡಿಗೆ ಹಿಂಡೇ ಬಂದು ಗದ್ದೆಯನ್ನು ಧ್ವಂಸ ಮಾಡಲು ಸಾಧ್ಯವಿಲ್ಲವಂತೆ. ಮನುಷ್ಯನ ಮೈವಾಸನೆ  ಬಂದರೂ ಸಾಕಂತೆ.  ಅಂದರೆ ಮನುಷ್ಯನ ಮೈವಾಸನೆಗೆ ಹಂದಿಯೂ ಬಲಿ ಬರಲಾರದೆಂತಾಯಿತು ಅಲ್ಲವೇ? ಹಂದಿಯ ವಾಸನೆಯನ್ನು  ಹೀಗಳೆದಿದ್ದಕ್ಕೆ ಹಂದಿಗಳ ಪ್ರತಿ ಆರೋಪವೋ ಏನೋ. ಅಂತು ಈ ವಾಸನೆಯ ಕಥೆಯನ್ನು ಹೇಳಿ ಮಾಳಕ್ಕೆ ಹೋಗಲು ಹೆದರುವವರನ್ನು ಹುರಿದುಂಬಿಸುವ ಉಪಾಯವಿರಬೇಕು! ನಿಜವಾದ ಹಂದಿ ನಾನು ಮಾಳಕ್ಕೆ ಹೋದಾಗ ಒಮ್ಮೆಯೂ ಬಂದಿರಲೇ ಇಲ್ಲ. ಒಮ್ಮೆ ಯಕ್ಷಗಾನ ನೋಡಿ ನಡೆಕೊಂದು ಬೆಳಗಿನ ಜಾವ ಮನೆಯ ಕಡೆ ಬರುತ್ತಿರುವಾಗ ಕೊಬ್ಬಿದ ಕಾಡ ವರಾಹದ ದರುಶನವಾಗಿತ್ತು. ಮಾಳ ಹಂದಿಯ ಪೀಡೆಗೆ ಮಾತ್ರ ಪರಿಹಾರವಲ್ಲ. ಬೇಸಿಗೆಯ ಮಧ್ಯಾನ್ಹದಲ್ಲಿ ಉದ್ದಿನ ಗದ್ದೆಗೆ ಮಂಗಗಳ  ಕಾಟ ತಪ್ಪಿಸಲು ಇದು ಸುಲಭೋಪಾಯ. ಬುಸು ಬುಸು ಬೀಸುವ ತಂಗಾಳಿಯಲ್ಲಿ ಮಾಳದಲ್ಲಿ ಬೇಸಿಗೆಯ ರಜೆಯಲ್ಲಿ ಅದೆಷ್ಟು ಇಸ್ಪೀಟು ಆಟ ಅಡಿದ್ದೆವೋ ಮಾಳಕ್ಕೆ ಮಾತ್ರ ಗೊತ್ತಿದೆ. 

ಒಮ್ಮೊಮ್ಮೆ ಯಕ್ಷಗಾನದ ಹಾಡುಗಾರಿಕೆ ಶುರು  ಮಾಡುತ್ತಿದ್ದೆ. ಬಿದಿರಿನ ತುಂಡಿನಿಂದ ತಯಾರಿಸಿದ ಕೊಟ್ಟoಡೆ ಟಂ ಟಂ ನಿನಾದ ಲಯಬಧ್ಧ  ರಾಗಕ್ಕೆ ಸುತ್ತಲಿನ ಮಾಳಗಳ ಜನವೇ ಕೇಳುಗರು. ಹೇಗೆ ಹಾಡಿದರೂ ಸುಮ್ಮನಿರು ಅನ್ನುವ ಯಾರು ಇಲ್ಲ.  ಹಾಡು ಹೇಳಿದ ಮೇಲೆ ನನ್ನದೇ ಅರ್ಥಗಾರಿಕೆ. ನನಗೆ ನನ್ನದೇ ಪ್ರಶಂಸೆ!!. ಒಂದೇ ಪ್ರಸಂಗದ ಎಲ್ಲ ಪಾತ್ರಗಳೂ ನಾನೆ ಆಗಿ ಏಕವ್ಯಕ್ತಿ ಪ್ರಸಂಗದ  ಮೊದಲ ಸಂಶೋಧಕ ನಾನೇ ಅನ್ನುವ ಅಭಿಪ್ರಾಯ ಈಗಲೂ ನನಗಿದೆ. ಕೆಲವೊಮ್ಮೆ ನಾನು ಮಾಳದ ಬಳಿ ಬೆಂಕಿ  ಹಾಕುತ್ತಿದ್ದೆ. ಮಾಳದ ಬಳಿ  ಬೆಂಕಿ ಕಾಯಿಸಲು ಅಲ್ಲ ಮೈ ಕಾಯಿಸಲು ಪಕ್ಕದ ಮಾಳಗಳ ಕಾವಲು ಭಟರೂ  ಬರುತ್ತಿದ್ದರು. ಬೆಂಕಿ ಕಾಯಿಸುವಾಗ ಹಾಸ್ಯ, ರೋಚಕ ಕಥೆಗಳ ವಿನಿಮಯ... ಕವಳ ಹಾಕುತ್ತ ತಮ್ಮ ತಮ್ಮ ನೆನಪಿನ ಆಳವನ್ನು ಕೆದಕಿ ಹೆಕ್ಕಿತೆಗೆದು ಒಂದಷ್ಟು ಮಸಾಲೆ ಸೇರಿಸಿ ಕಥೆ ಹೇಳುತ್ತಿದ್ದರೆ ಮಧ್ಯ ರಾತ್ರಿ ಕಳೆದು ಕಣ್ಣು ಮುಚ್ಚಿ ಬರುತ್ತಿತ್ತು.
ನೈಜ ಕಥೆಯೋ ಕಟ್ಟು ಕಥೆಯೋ ನನಗೆ ಆಗ ತಿಳಿಯುತ್ತಿರಲಿಲ್ಲ. ಅರ್ಥವಾಗದಿದ್ದರೂ ಹೂಗುಟ್ಟುವ ಕುತೂಹಲ ಕಂಗಳಿಂದ ಮುಂದೆ ಮುಂದೆ ಎನ್ನುತ್ತಾ ಕೇಳುವ ನಾನೊಬ್ಬ ಮುಗ್ಧ ಶ್ರೋತೃವಾಗಿದ್ದೆ.  ಮಾಳ ಕಾಯಲೆಂದು ಮನೆಯಿಂದ ಹೊರಟ ಕುಟ್ಟಜ್ಜ ಸುಮಾರು ನಾಲ್ಕೈದು ಕಿಲೋಮೀಟರು ದೂರದ ಕೆಳಾಸೆಗೆ ಹೋಗಿ ಬೆಳಗಾಗುವುದರ ಒಳಗೆ ಮನೆ ಸೇರುತ್ತಿದ್ದ   ಸಾಹಸದ ಕಥೆ ಇನ್ನು ಸ್ಮೃತಿಪಟಲದಲ್ಲಿ ಹಾಗೆ ಉಳಿದಿದೆ.  ಮಾಗೋಡಿನ ಕುಟ್ಟಅಜ್ಜನಿಗೂ ಕೆಲಾಸೆಯ ಹೆಗಡೆಯ ಹೆಂಡತಿಗೂ  ವಿವಾಹ ಪೂರ್ವದಲ್ಲಿಯೇ ಪ್ರೆಮಾನ್ಕುರವಾಗಿತ್ತು. ಅಪ್ಪನ ಭಯದಲ್ಲಿ ತನ್ನ ಪ್ರೀತಿಯನ್ನು ಮುಚ್ಚಿಟ್ಟು ಅಪ್ಪನ ಆಯ್ಕೆಯಾದ ಕೆಲಾಸೆಯ ಹೆಗಡೆಯ ಎಂಟು ಎಕರೆ ಗದ್ದೆ ನಾಲ್ಕೈದು ಎಕರೆ ತೋಟದ ಶ್ರೀಮಂತಿಕೆಯ ಒಡತಿಯಾಗಿದ್ದಳು   ಮಾದೇವಿ. ಕುಟ್ಟಅಜ್ಜ ನ ಪ್ರೀತಿ ತವಕ ಎಸ್ತಿತ್ತೆಂದರೆ ಅಜ್ಜ  ನಿತ್ಯವೂ ಮಾದೆವಿಯನ್ನು ನೋಡಲು ಮಾತಾಡಲು ಹವಣಿಸುತ್ತಿದ್ದ. ನಾಲ್ಕೈದು ಕಿಲೋ ಮೀಟರು  ನಡೆದು  ಕೆಲಾಸೆಯನ್ನು ಸೇರುತ್ತಿದ್ದ. ಊಟವಾಗಿ ಹೆಗಡೆ ಮಲಗುವ ಸಮಯಕ್ಕೆ ಕುಟ್ಟಜ್ಜ ಮನೆಯ ಹಿಂಬಾಗಿಲಿನ ಹಿತ್ತಲ ಬಲಿ ಹೋಗಿ ಕುಳಿತುಕೊಳ್ಳುತ್ತಿದ್ದ. ದನದ ಕುತ್ತಿಗೆಗೆ ಕಟ್ಟುವ ಗಂಟೆಯನ್ನು ಶಬ್ದ ಮಾಡಿ ಕಳ್ಳ ದನ ಬಂದಿರುವ ಹುಸಿ ಸನ್ನಿವೇಶ ಸೃಷ್ಟಿಸುತ್ತಿದ್ದ. ಹುಟ್ಟು ಆಳಸಿಯಾಗಿರುವ ಹೆಗಡೆ ದನವನ್ನು ಓಡಿಸುವಂತೆ ಹೆಂಡತಿಗೆ ಗದರಿಸುತ್ತಿದ್ದ. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ. ಕಳ್ಳ ದನವನ್ನು ಓಡಿಸುವ ನೆಪದಲ್ಲಿ ಹೆಗಡೆಯ ಹೆಂಡತಿ ಕುಟ್ಟ ಅಜ್ಜನ ಜೊತೆ ಕೊಟ್ಟಿಗೆಯ ಅಟ್ಟ  ಹತ್ತಿ ಒಂದಷ್ಟು ಸಮಯ ಕಳೆದು ಬರುತ್ತಿದ್ದಳು. ಮಾಳಕಾವಲಿನ ರಾತ್ರಿಯ ಕತ್ತಲಲ್ಲಿ ನಿಗೂಡ ರಹಸ್ಯಗಳೆಲ್ಲ ಕರಗಿ ಹೋಗುತ್ತಿದ್ದವು.

ಮಾಳವೆಂಬ ಮಾಯೆ ಸಮಾಜದ  ಇಂತಹ ನಿಗೂಡ ಸಂಬಂಧಗಳ ಸೃಷ್ಟಿಗೆ ಪೂರಕವಂತೂ ಹೌದು.
ಕಥೆ ಹೀಗೆ ರೋಚಕತೆಯನ್ನು, ರಸಿಕತೆಯನ್ನು ಕೊನೆಗೆ ಸಿಕ್ಕಿ ಹಾಕಿಕೊಂಡ ಕುತ್ತ ಅಜ್ಜ ಹೊಡೆತ  ತಿಂದು  ಕಾಲು  ಮುರಿದು  ಕೊಂಡದ್ದು  ಇನ್ನೂ  ಏನೇನೋ  ಕಥೆಗಳೊಂದಿಗೆ  ಮುಂದುವರೆಯುತ್ತಿತ್ತು. ಮಾಳ  ಕಾಯುವವರು  ಚಳಿಗೆ  ತಮ್ಮ  ಮೈ  ಬಿಸಿ  ಏರಿಸಿಕೊಳ್ಳಲು, ಬೇರೆ ಸಹಕಾವಲುಗಾರರನ್ನು ಪ್ರಚೋದಿಸಲು   ಮಾಡುತ್ತಿದ್ದ  ತಂತ್ರ  ಅನ್ನುವುದು  ನಮಗೀಗ  ಅರ್ಥವಾಗಬಹುದು. ಸಭ್ಯತೆ-ಅಸಭ್ಯತೆಯ ತಾರತಮ್ಯವನ್ನು ಇಟ್ಟುಕೊಳ್ಳದೆ ಇಂತಹ ಕಥೆಗಳನ್ನು ಮಾಳಕಾವಲಿನಲ್ಲಿ ಹರಿಯಬಿಡುತ್ತಾರೆ.ಗದ್ದೆಯ ಮಾಳಕ್ಕಿಂತ ಕಬ್ಬಿನ ಗದ್ದೆಯ ಮಾಳ ಹೆಚ್ಚು ಕಾಲ ಬೇಕಾಗುತ್ತದೆ. ನಮ್ಮ ಕಬ್ಬಿನ ಮಾಳ ಎರಡನ್ತಸ್ತಿನದ್ದಾಗಿತ್ತು. ಅಣ್ಣನಿಗೆ ಮೇಲಿನ ಅಂತಸ್ತು. ನನ್ನದು ಕೆಳಗಿನ ಅಂತಸ್ತು.ಆದರೆ ಕಬ್ಬಿನ ಗದ್ದೆಯ ಮಾಳಕ್ಕೆ ಸೀಮಿತ ಅವಧಿಯಿಲ್ಲ. ಸೀಸನ್ ನಲ್ಲಿ ಮಾತ್ರ ಬಂದು ಹೋಗುವ ಸಂಭ್ರಮವಲ್ಲ.
ಗದ್ದೆಯ ಎಡ ಬಲಗಳಲ್ಲಿ ಬೆಟ್ಟಗಳ ಸಾಲು. ಬಾನಿನೆತ್ತರಕ್ಕೆ ಬೆಳೆದು ನಿಂತ ಕಾನನ. ವಂದ್ಯಾವಂದ್ಯ  ಸಸ್ಯ ಸಂಕುಲದ   ಪ್ರಫುಲ್ಲ ಕುಸುಮ  ಕಂಪು. ತರು  ಲತೆ ಗುಲ್ಮ ದ್ರುಮ ಹರಿದ್ವರ್ಣ ಆಚ್ಛಾದಿತ   ವಸುಂಧರೆಯ ಸುಂದರ ನಯನ ಮನೋಹರ ಚೆಲುವು ಒಂದೆಡೆಯಾದರೆ, ತೆಂಗು ಕಂಗು ಬಾಳೆಯಿಂದ  ತುಂಬಿದ ತೋಟ ಉಳಿದೆಡೆ. ನಡುವೆ ವಿಶಾಲ ಬಯಲನ್ನು ಮುಚ್ಚಿದ  ಕಾರ್ಗತ್ತಲ ಅನಂತಾನಂತ ಆಕಾಶ. ಇಂತಹ ಪ್ರಶಾಂತ ಪರಿಸರದಲ್ಲಿ ನಾನು ಭಾವಾವೇಶಪರವಶನಾಗಿ ಉನ್ಮತ್ತ ಚಿತ್ತನಾಗಿ ಆನಂದತುಂದಿಲನಾಗಿ ಭಾರತ-ರಾಮಾಯಣ-ಭಾಗವತ ಕಥಾನಕಗಳ ಓದನ್ನು ಸವಿಯುತ್ತಿದ್ದೆ.ಬೆಚ್ಚನೆಯ ಹೊದಿಕೆಯನ್ನು ಹೊದ್ದು ಸುಖನಿದ್ದೆ ಮುಗಿಸಿ ಕಣ್ತೆರೆದರೆ ಪೂರ್ವ ದಿಗಂತದಲ್ಲಿ ರಕ್ತಾರುಣೋದಯವಾಗಿರುತ್ತಿತ್ತು.   ಕಾಲಿನ  ಪದುಕೆಯನ್ನು  ಮೆಟ್ಟಿ  ಮಾಳದಿಂದ  ಕೆಳಗಿಳಿದು ಹೊರಟರೆ  ಕಾಲುದಾರಿಯುದ್ದಕ್ಕು  ರಾತ್ರಿಯೆಲ್ಲಾ  ಸುರಿದ   ಮಂಜು  ಹನಿ  ಮುತ್ತು  ಪೋಣಿಸಿದಂತೆ  ಹೊಳೆಯುತ್ತಿತ್ತು.ಇಂತಹ ಕೊರೆಯುವ ಚಳಿಯಲ್ಲಿ ಹೊಂಡದ ನೀರು ಮಾತ್ರ ಬಿಸಿಯಿರುತ್ತಿತ್ತು.
 ಮಾಳ ಕೇವಲ ಹೊಲದ ಕಾವಲುಗಾರನಿಗೆ ನಿರ್ಮಿಸುವ ಚೌಕಿ ಮನೆಯಲ್ಲ.  ಕೃಷಿಕ ಹಿನ್ನೆಲೆಯ ಬಾಲಕರನೆಕರು ತಮ್ಮ ಬಾಲ್ಯವನ್ನು ಕಳೆದ ಸುಂದರ ತಾಣ.  ಪ್ರಕೃತಿಯ ಮಡಿಲಲ್ಲಿ ಕನಸನ್ನು ಕಟ್ಟಿ ಸುಂದರ ವ್ಯಕ್ತಿತ್ವ ರೂಪಿಸಿಕೊಂಡ ಸಾಧನ ಕ್ಷೇತ್ರ. ಮಾಳಕಾವಲಿನ ಮಜ ಮತ್ತು ಸುಖ ವಿಭಿನ್ನ  ಅನುಭವ.

3 comments:

ಚುಕ್ಕಿಚಿತ್ತಾರ said...

ಹಕ್ಕೆ ಕಾವಲು ಅಲಿಯಾಸ್ ಮಾಳ ಕಾವಲಿನ ಕಥಾಲಹರಿ ವಿಸ್ತಾರವಾಗಿ ಸಾಗಿದೆ... ಒಳ್ಳೆ ವಿವರಣೆ.

Unknown said...

ನೀವು ಎಲೆಕ್ಟ್ರಾನಿಕ್ ಇಂಜಿನಿಯರ್ ಆಗಿದ್ದರೂ, ನಿಮ್ಮ ಕನ್ನಡ ಜ್ಞಾನ ಬಹಳ ಅಗಾಧ. ನಾನು ಕುಮಾರ ಭಾರತದಲ್ಲಿ ನಿಮ್ಮ ತಿದ್ದುಪಡಿ ಓದಿದೆ. ಧನ್ಯವಾದಗಳು.

ಶಿವರಾಮ ಭಟ್ said...

ಅಂತರ್ಜಾಲದಲ್ಲಿ ಬೇರೆಯವರ ಕನ್ನಡ ಲೇಖನ ಓದುವವರೇ ವಿರಳ. ಓದಿದ ಮೇಲೆ ಪ್ರತಿಕ್ರಿಯಿಸುವವರು ಇನ್ನೂ ವಿರಳ .... ನನ್ನ ಲೇಖನವನ್ನು ಓದಿ ಪ್ರತಿಕ್ರಿಯಿಸುವ ನಿಮ್ಮ ಮೊನೋಭಾವ ಇಷ್ಟವಾಯಿತು. ಧನ್ಯವಾದಗಳು.