ಅನ್ವಿತ ಪುಟ್ಟಿಗೆ ಈಗ ಎರಡು ವರ್ಷ ನಾಲ್ಕು ತಿಂಗಳು. ಅವಳ ಬಾಲ್ಯ ಒಂದು ಮಧುರ ಗೀತೆ. ಅವಳ ಸುಕೋಮಲ ಸ್ಪರ್ಶ,ಬಾಲ ಭಾಷೆಯ ನಿನಾದ, ತುಂಟಾಟದ ದೃಶ್ಯ ವೈಭವ - ಒಂದು ಸುಂದರ ಅನುಭವ. ಅವಳ ಮಾತಿನಲ್ಲಿ ಅಪಾರ ಹಾಸ್ಯ ಅಡಗಿರುತ್ತದೆ. ಹೊಸತನವಿರುತ್ತದೆ. ಅವಳಿಂದ ನಿತ್ಯ ಹೊಸ ತುಂಟತನದ ಅನ್ವೇಷಣೆ ನಡೆಯುತ್ತಲೇ ಇರುತ್ತದೆ. ನಮ್ಮ ಮಾತನ್ನೇ ಅನುಕರಣೆ ಮಾಡಿ ಹೊಸ ಹಾಸ್ಯ ಹುಟ್ಟುಹಾಕುತ್ತಾಳೆ. ಕನ್ನಡ ವ್ಯಾಕರಣ ಕೂಡ ಸುಧಾರಿಸಿದೆ. ಭೂತ - ಭವಿಷ್ಯತ್ ಕಾಲಗಳು ತಲೆಕೆಳಗಾಗುತ್ತವೆ.
ಅಪ್ಪಾ ನಾನು ಇರುವೆ "ಸತ್ತು ಹಾಕಿದ್ದೆ" ಅನ್ನುತ್ತಾಳೆ. "ಬಾನ ದಾರಿಯಲ್ಲಿ .. ಹಾಡು "ಕೇಳೋ"..ಅನ್ನುತ್ತಾಳೆ. [ ಹೇಳೋ ಅನ್ನುವುದರ ಬದಲು ]. ರಾತ್ರಿ ಟೆರೆಸ್ ನಲ್ಲಿ "ಸೂರ್ಯ" ಕಾಣುತ್ತಾನೆ ಅವಳಿಗೆ... ಊರಿಗೆ ಫೋನ್ ಮಾಡಿದರೆ "ಆಕಳ ಕರುವಿಗೆ, ನಾಯಿಗೆ, ಬೆಕ್ಕಿಗೆ ಎಲ್ಲ "ಫೋನ್ ಕೊಡು ನಾನ್ ಮಾತಾಡ್ತೆ" ಅನ್ನುತ್ತಾಳೆ!!
ಆದರೆ ಊರಲ್ಲಿ ಇರುವುದು ಮನುಷ್ಯರ ಫೋನ್ ಅನ್ನುವುದು ಇವಳಿಗೆ ಇನ್ನು ಗೊತ್ತಿಲ್ಲ.!!.
ಅವಳ ಅಕ್ಕ ಟೀವಿ ನೋಡುತ್ತಿದ್ದರೆ ಈ ಪುಟ್ಟ ಬಾಲೆ "ಅನಯ [ಅನನ್ಯ]ಟೀವಿ ನೋಡಡ ನಾನು ಚುಪ್ ಮಾಡ್ತೆ!" ಅನ್ನುತ್ತಾಳೆ!. ಭಾವನ ಮಗಳು ಆಶಿತಾಗೆ [೪ ವರ್ಷ ] ಇವಳು ಅತ್ತೆಯ ಹಾಗೆ. ಮುದ್ದು ಭಾಷೆಯಲ್ಲಿ ಉಪದೇಶ ಮಾಡುವ ವೈಖರಿ ನೋಡಿಯೇ ಆನಂದಿಸಬೇಕು!
ಮೊನ್ನೆ ನಾನು ಟೀವಿ ನೋಡುತ್ತಿದ್ದರೆ ಪುಟ್ಟಿ ಟೀವಿ ಆಫ್ ಮಾಡುತ್ತಿದ್ದಳು. ಒಮ್ಮೆ ಜೋರಾಗಿ ಗದರಿಸಿದರೆ 'ಅಮ್ಮ ನೋಡೇ'.... "ಅಪ್ಪ ಬ್ಯಾಡ್ ಗರ್ಲ್" ಅನ್ನಬೇಕೆ!!. ಚಾಕೊಲೆಟ್, ಐಸ್ ಕೀಂ, ಜೆಮ್ಚು ಕೊಡಿಸಿದರೆ "ಅಪ್ಪ ಗುಡ್ ಗರ್ಲ್".
ಅಕ್ಟೋಬರ್ ರಜಕ್ಕೆ ನಾವು ಊರಿಗೆ ಹೋಗಿದ್ದೆವು. ದಾರಿಯಲ್ಲಿ ನಾನು ಹೋಟೆಲ್ ಸಮೀಪದ ಅಂಗಡಿಯೊಂದರಲ್ಲಿ ಮರದ "ಕೋಳಿ ಮೊಟ್ಟೆ" ಕೊಡಿಸಿದ್ದೆ. ಬುಗರಿ, ಗಿರಿಗಿಟ್ಟಿ ಮತ್ತೆ ಮೊಟ್ಟೆ ಅಂದರೆ ಪುಟ್ಟಿಗೆ ಪಂಚಪ್ರಾಣ. ನಿದ್ದೆ ಮಾಡುವಾಗ ತಲೆ ದಿಂಬಿನ ಬಳಿಯೇ ಇರಬೇಕು. ಊರಿಗೆ ಹೋಗಿದ್ದಾಗ ಈ ಕಿತಾಪತಿ ಹುಡುಗಿ ಅವಳ ಕಸಿನ್ ಹುಡುಗನ ಚಡ್ಡಿ ಮುಟ್ಟಿ ಒಳಗೆ "ಮೊಟ್ಟೆ ಇದೆ" ಅನ್ನೆಬೇಕೆ. ನಮಗೆಲ್ಲ ನಕ್ಕು ನಕ್ಕು ಸಾಕಾಯಿತು. ಈ ಮರಿ ವಿಜ್ಞಾನಿ ಇನ್ನೇನೇನು ಕಂಡು ಹಿಡಿಯುತ್ತಾಳೋ ಅನ್ನುವ ಗಾಬರಿ ಸುತ್ತಲಿದ್ದವರಿಗೆ.
ಅನ್ವಿತ ಪುಟ್ಟಿಗೆ ಸ್ವಲ್ಪ ಅಲರ್ಜಿ ಸಮಸ್ಯೆ ಇತ್ತು. ದಿನಾಲೂ ಮಲಗುವಾಗ ಅವಳಿಗೆ "Fexy" ಅನ್ನುವ ಔಷದಿ ಕೊಡುತ್ತಿದ್ದೆವು. ಒಂದುದಿನ ಔಷಧಿ ಕೊಡಲು ಮರೆತಾಗ ಈ ಪುಟಾಣಿ "ಅಪ್ಪಾ ನನಗೆ ಸೆಕ್ಸಿ ಕೊಡು ಅನ್ನಬೇಕೆ?" ನಾವು ಒಂದು ಕ್ಷಣ ತಬ್ಬಿಬ್ಬು.
ಭಾವನ ಮಗಳು "ಊರಿಗೊಬ್ಳೆ ಪದ್ಮಾವತಿ" ಹಾಡನ್ನು ಕಲಿತಿದ್ದಾಳೆ. ತನ್ನ ಮುದ್ದು ಭಾಷೆಯಲ್ಲಿ "ಡೋಂಟ್ ಯೂ ನೋ ಡೋಂಟ್ ಯೂ ನೋ ಆಯಮ್ ವೆರಿ ಪೆಪ್ಸಿ" ಅನ್ನುತ್ತಾಳೆ. ಅನ್ವಿತ ಇನ್ನು ಬುಧ್ಧಿವಂತೆ ಇದನ್ನು ಸರಿಯಾಗೇ ಕಲಿತಿದ್ದಾಳೆ!!!. ಅನ್ವಿತಾ ಸೊಂಟ ಕುಣಿಸುವುದನ್ನು ನೋಡಿದ್ರೆ ಕತ್ರಿನ ಕೈಫು ಓಡಿ ಹೋಗುವುದು ಗ್ಯಾರಂಟಿ.
ನನ್ನ ತಂಗಿಯ ಮಗ ಚಿಕ್ಕನಿರುವಾಗ ಎಲ್ಲರಿಗೂ ಬಹುವಚನ ಉಪಯೋಗಿಸುತ್ತಿದ್ದ. "ನಾಯಿ ಯವರು ಊಟ ಮಾಡ್ತಾ ಇದ್ದಾರೆ " "ಬೆಕ್ಕು ಆರಾಮಿದ್ರ..." "ತೋಟಕ್ಕೆ ಮಂಗ ಬಯಿಂದ್ರು" ಇತ್ಯಾದಿ.....
ಇನ್ನು ಒಂದು ವಾರದಲ್ಲಿ ಅನ್ವಿತ ಪುಟ್ಟಿ ಪ್ಲೇ ಹೋಂ ಸೇರಲಿದ್ದಾಳೆ. ಮೊನ್ನೆ ಅವಳನ್ ನು ಪ್ಲೇ ಹೋಮಿಗೆ ಸೇರಿಸಲು ಹೋಗಿದ್ದಾಗ ಅವಳ ಟೀಚರ್ರಿಗೆ ಮುಖ ಗಿಂಜಿ ಊ.. ಹೀ.. ಅನ್ನುವ ಕೋತಿ ಚೇಷ್ಟೆ ಮಾಡಿ ಬಂದಿದ್ದಾಳೆ. ಅಕ್ಕನ ಕೈಗೆ ಬಾಯಿ ಹಾಕಿ ಕಚ್ಚಿ ನೋವಾದಾಗ ಅವಳು ಅತ್ತರೆ ಇವಳು "ಅಕ್ಕ ಕಚ್ಚು ಹೇಳಿತ್ತು" ಅಂತ ಸಮಜಾಯಿಸಿ ಬೇರೆ ಕೊಡುತ್ತಾಳೆ. ಉಪಾಯವಾಗಿ ಬೆ ರಳು ಕಚ್ಚಿ "ಚಾರ್ಲಿ..... ಯೂ ಬಿಟ್ ಮಿ" ಅನ್ನುವಷ್ಟು ಜೋರಾಗಿದ್ದಾಳೆ . ಎಲ್ಲ "ಯೂ ಟ್ಯೂಬ್" ಪ್ರಭಾವ...
ನೀರೆಂದರೆ ಈ ಪುಟ್ಟ ನೀರೆಗೆ ಪಂಚ ಪ್ರಾಣ. ಲೋಟದಲ್ಲಿ ನೀರು ತೆಗೆದುಕೊಂಡು ನೆಲದಮೇಲೆ ಚೆಲ್ಲಿದಾಗ ಸ್ವಲ್ಪ ಬಯ್ದರೆ "ಲೋಟಾನೆ ನೀರು ಚೆಲ್ಲಲು ಹೇಳಿತ್ತು "ಎನ್ನುತ್ತಾಳೆ. ಅಂತೂ ತಾನು ತಪ್ಪಿಸಿಕೊಳ್ಳುವ ಉಪಾಯ ಚೆನ್ನಾಗಿಯೇ ತಿಳಿದಿದೆ.
ಇಂತಹ ಬಾಲೆಯ ಮುದ್ದು ಮುಖ ನೋಡಿದರೆ ನಾನು ನೂರಾರು ಮುತ್ತಿನ ಸುರಿಮಳೆಗರೆಯುತ್ತೇನೆ. ಅವಳ ಕೆನ್ನೀರ ಕೆನ್ನೆಗೆ ಎರಡು, ಹಣೆಗೆ ಒಂದು, ಕೈಗೆ ಹೀಗೆ ಮುತ್ತು ಕೊಟ್ಟರೆ "ಗಂಡಂಗೆ ಒಂದು " ಅನ್ನಬೇಕೇ? "ಗಡ್ಡಕ್ಕೆ" ಅನ್ನುವುದು ಅವಳ ಭಾಷೆಯಲ್ಲಿ "ಗಂಡಂಗೆ" ಆಗಿತ್ತು. ಹಾಲು ಗಲ್ಲದ ಹಸುಳೆಯ ಇಂತಹ ಮಾತುಗಳು ಒಂದು ಸುದೀರ್ಘ ಹಾಸ್ಯ ಧಾರಾವಾಹಿಯೇ ಸರಿ. ಇನ್ನೂ ಅದೆಷ್ಟೋ ಹಾಸ್ಯ ಪ್ರಸಂಗಗಳು ನಡೆಯುತ್ತಲೇ ಇರುತ್ತದೆ.
7 comments:
ಪುಟ್ಟಿಯ ಹಾಸ್ಯ ಪ್ರಜ್ಞೆ ಚೆನ್ನಾಗಿದೆ! ಬಹಳ ಇಷ್ಟವಾಯ್ತು. ಅಭಿನ೦ದನೆಗಳು.
ಮಕ್ಕಳ ಬಾಲ್ಯದ ಸಂಭ್ರಮ ಕ್ಷಣಗಳನ್ನು ಅನಿಮುತ್ತನ್ನಾಗಿಸಿ ನಮಗೆ ನೀಡಿದ್ದೀರಾ... ಧನ್ಯವಾದಗಳು.
ಪ್ರಭಾಮಣಿ ಮೇಡಂ, ಸೀತಾರಾಮ್ ಸರ್ ಓದಿ ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು.
ಹೇ ಶಿವಣ್ಣಾ,
ಅನ್ವಿತಾ ಪುಟ್ಟಿ ರಾಶಿನೇ ದೊಡ್ದಾಗೊಯ್ದೋ. ಅವಳನ್ನು ನೋಡುವ ಆಸೆ...........
ಇನ್ನು ೨.೫ ತಿಂಗಳು...ನಿಂಗೋ ಬರುಲೇ.
ಮಸ್ತ್ ಮಜಾ ಆಯ್ದು ಕೂಸು!!...
baradiddu channaagaaydu.. naanu odirle ille.. maglu hushaariddu...:))
ಬಾಲ್ಯದ ತುಂಟಾಟಗಳೇ ಹೀಗೆ...
ನೀವು ಅದನ್ನು ನಿರೂಪಿಸಿದ ಶೈಲಿಯೂ ಮಸ್ತಾಗಿದೆ....ಚಂದದ ಬರಹ...
Post a Comment